ತಫಿಸ (TAFISA) ವಿಶ್ವ ಕ್ರೀಡಾಕೂಟದಲ್ಲಿ ಭಾರತಕ್ಕೆ ಒಂದು ಚಿನ್ನ ಸೇರಿದಂತೆ ನಾಲ್ಕು ಪದಕಗಳು

ಭಾರತದ ಕುಸ್ತಿಪಟುಗಳು ಇಂಡೊನೇಷ್ಯಾದ ಜರ್ಕಾರದಲ್ಲಿ  ಮುಕ್ತಾಯಗೊಂಡ 6ನೇ ತಫಿಸ ವಿಶ್ವ ಕ್ರೀಡಾಕೂಟದಲ್ಲಿ ಒಂದು ಚಿನ್ನ ಸೇರಿದಂತೆ ನಾಲ್ಕು ಪದಕಗಳನ್ನು ಗೆದ್ದುಕೊಂಡಿದ್ದಾರೆ. 60ಕೆ.ಜಿ ವಿಭಾಗದಲ್ಲಿ ದಾಲ್ಮಿಯ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಫೈನಲ್‌ನಲ್ಲಿ ಅವರು 4–1ರಲ್ಲಿ ಮೊಹಮ್ಮದ್‌ ಸಹಾನ್‌ ಎದುರು ಜಯ ದಾಖಲಿಸಿದರು.

ಲುವ್‌ ಸಿಂಗ್‌: ಲುವ್ ಸಿಂಗ್ ಅವರು 80ಕೆ.ಜಿ ವಿಭಾಗದಲ್ಲಿ ಬೆಳ್ಳಿ ಗೆದ್ದುಕೊಂಡರು. ಅಜರ್ಬೈಜನ್ ನ ಮೊಹಮ್ಮದ್ ಅಲಿ ಅವರಿಗೆ ಫೈನಲ್ ಪಂದ್ಯದಲ್ಲಿ ಶರಣಾಗುವ ಮೂಲಕ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು.

ನವೀನ್‌ ಕುಮಾರ್‌: ನವೀನ್ ಕುಮಾರ್ ಅವರು ಕಂಚಿನ ಪದಕವನ್ನು ಪಡೆದುಕೊಂಡರು. 90ಕೆ.ಜಿ ವಿಭಾಗದಲ್ಲಿ ಲಿಥುನಿಯಾದ ಒಲೆಗ ಅವರನ್ನು 5-2 ರಿಂದ ಮಣಿಸಿ ಕಂಚನ್ನು ತಮ್ಮದಾಗಿಸಿಕೊಂಡರು.

ಜೋಸಿಲ್‌:  ಸೂಪರ್ ಹೆವಿವೇಟ್ ವಿಭಾಗದಲ್ಲಿ ಆಪ್ಘಾನಿಸ್ತಾನದ ಮುಸ್ತಾಪ ಸುಲ್ತಾನಿ ಅವರನ್ನು 3-1 ಅಂಕಗಳಿಂದ ಸೋಲಿಸಿ ಕಂಚಿಗೆ ಕೊರಳೊಡ್ಡಿದರು.

ಅಕ್ಟೋಬರ್ 17: ಅಂತಾರಾಷ್ಟ್ರೀಯ ಬಡತನ ನಿರ್ಮೂಲನ ದಿನ

ಅಂತಾರಾಷ್ಟ್ರೀಯ ಬಡತನ ನಿರ್ಮೂಲನ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 17 ರಂದು ಆಚರಿಸಲಾಗುವುದು. ಜಾಗತಿಕ ಮಟ್ಟದಲ್ಲಿ ಬಡತನವನ್ನು ನಿರ್ಮೂಲನೆ ಮಾಡುವ ಅಂಗವಾಗಿ ಈ ದಿನವನ್ನು ಆಚರಿಸಲಾಗುತ್ತದೆ.

  • ಜಗತ್ತಿನಲ್ಲಿ ಬಡತನ ಮತ್ತು ದಾರಿದ್ರ್ಯವನ್ನು ಹೋಗಲಾಡಿಸುವುದು, ಅದರಲ್ಲೂ ಮುಂದುವರೆಯುತ್ತಿರುವ ದೇಶಗಳಲ್ಲಿ ಬಡತನವನ್ನು ತೊಡೆದುಹಾಕುವ ಸಲುವಾಗಿ ಅರಿವು ಮೂಡಿಸಲು ಅಂತಾರಾಷ್ಟ್ರೀಯ ಬಡತನ ನಿರ್ಮೂಲನ ದಿನವನ್ನು ಆಚರಿಸಲಾಗುವುದು.

2016 ಥೀಮ್: “Moving from humiliation and exclusion to participation: Ending poverty in all its forms”.

ಹಿನ್ನಲೆ:

ಡಿಸೆಂಬರ್ 22, 1992 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳುವ ಮೂಲಕ ಅಂತಾರಾಷ್ಟ್ರೀಯ ಬಡತನ ನಿರ್ಮೂಲನ ದಿನದ ಆಚರಣೆಗೆ ಚಾಲನೆ ನೀಡಲಾಯಿತು. 1993 ರಲ್ಲಿ ಪ್ರಥಮ ಬಾರಿಗೆ ಆಚರಿಸಲಾಯಿತು.

ಗೋವಾದಲ್ಲಿ 8ನೇ ಬ್ರಿಕ್ಸ್ ಶೃಂಗಸಭೆ ಮುಕ್ತಾಯ

ಗೋವಾದಲ್ಲಿ ಅಕ್ಟೋಬರ್ 15 ಮತ್ತು 16 ರಂದು ನಡೆದ ಎರಡು ದಿನಗಳ 8ನೇ ಬ್ರಿಕ್ಸ್ ಶೃಂಗಸಭೆ “ಗೋವಾ ಘೋಷಣೆ(Goa Declaration)”ಯೊಂದಿಗೆ ಮುಕ್ತಾಯಗೊಂಡಿತು. ಈ ಸಮ್ಮೇಳನದಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಬ್ರೆಜಿಲ್ ಅಧ್ಯಕ್ಷ ಮಿಷೆಲ್ ಟೆಮೆರ್ ಮತ್ತು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಜಾಕೋಬ್ ಝೂಮ ರವರು ಭಾಗವಹಿಸಿದ್ದರು.

ಗೋವಾ ಘೋಷಣೆ ಪ್ರಮುಖಾಂಶಗಳು:

  • ಎಲ್ಲಾ ವಿಧದ ಭಯೋತ್ಪಾದನೆಯನ್ನು ಬ್ರಿಕ್ಸ್ ರಾಷ್ಟ್ರಗಳು ತೀವ್ರವಾಗಿ ಖಂಡಿಸಿದವು ಹಾಗೂ ಇಂತಹ ಕೃತ್ಯಗಳಿಗೆ ಯಾವುದೇ ಸಮರ್ಥನೆ ಇಲ್ಲವೆಂಬ ಒಮ್ಮತಕೆ ಬಂದವು.
  • ಅಂತಾರಾಷ್ಟ್ರೀಯ ಭಯೋತ್ಪಾದನೆ ಅದರಲ್ಲೂ ಮುಖ್ಯವಾಗಿ ಇಸ್ಲಾಮಿಕ್ ಸ್ಟೇಟ್ ನಿಂದ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಇರುವ ಬೆದರಿಕೆ ಬಗ್ಗೆ ಚರ್ಚಿಸಲಾಯಿತು.
  • ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ವಿಶ್ವಸಂಸ್ಥೆಯ ಸುಧಾರಣೆಯ ತುರ್ತು ಅಗತ್ಯವಿದ್ದು, ಅಭಿವೃದ್ದಿಶೀಲ ರಾಷ್ಟ್ರಗಳ ಪ್ರಾತಿನಿಧ್ಯವನ್ನು ಹೆಚ್ಚಿಸಲು ಅಗತ್ಯವಿರುವ ಬಗ್ಗೆ ಚರ್ಚಿಸಲಾಯಿತು.
  • ಅಂತಾರಾಷ್ಟ್ರೀಯ ಭಯೋತ್ಪಾದನೆ ಕುರಿತ ಸಮಗ್ರ ಒಪ್ಪಂದ’ದ (ಸಿಸಿಐಟಿ) ಭಾರತ ವಿಶ್ವಸಂಸ್ಥೆಯಲ್ಲಿ ಈ ಹಿಂದೆಯೇ ಮಂಡಿಸಿದೆ. ಆದರೆ ಅದು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಈ ಒಪ್ಪಂದವನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನ ಚುರುಕುಗೊಳಿಸಬೇಕು ಎಂದು ಒತ್ತಾಯಿಸಲಾಯಿತು.
  • ಸುಸ್ಥಿರ ಅಭಿವೃದ್ದಿ ಮತ್ತು ಸುಸ್ಥಿರ ಅಭಿವೃದ್ದಿ ಗುರಿಗಳ 2030 ಅಜೆಂಡವನ್ನು ಅಳವಡಿಸಿಕೊಂಡಿರುವ ಬಗ್ಗೆ ಮುಕ್ತವಾಗಿ ಶ್ಲಾಘಿಸಲಾಯಿತು.
  • 9ನೇ ಬ್ರಿಕ್ಸ್ ಶೃಂಗಸಭೆ ಸೆಪ್ಟೆಂಬರ್ 2017 ರಲ್ಲಿ ಚೀನಾದಲ್ಲಿ ನಡೆಯಲಿದೆ.

ಬ್ರಿಕ್ಸ್ ಬಗ್ಗೆ:

  • ಬ್ರಿಕ್ಸ್ ಎಂದರೆ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕ ಐದು ಪ್ರಮುಖ ಉದಯೋನ್ಮುಖ ರಾಷ್ಟ್ರೀಯ ಆರ್ಥಿಕ ಸಂಘಟನೆಗಳ ಸಂಕ್ಷಿಪ್ತ ರೂಪವಾಗಿದೆ.
  • ಬ್ರಿಕ್ಸ್ ಸಂಘಟನೆಯನ್ನು 2009ರಲ್ಲಿ ಸ್ಥಾಪಿಸಲಾಗಿದೆ. ಮುಂಚೆ ಇದನ್ನು ಬ್ರಿಕ್ ಎನ್ನಲಾಗುತಿತ್ತು. ದಕ್ಷಿಣ ಆಫ್ರಿಕ ಸೇರ್ಪಡೆಗೊಂಡ ನಂತರ ಬ್ರಿಕ್ಸ್ ಎನ್ನಲಾಗುತ್ತಿದೆ.
  • ಬ್ರಿಕ್ಸ್ ರಾಷ್ಟ್ರಗಳ ಮೊದಲ ಔಪಚಾರಿಕ ಶೃಂಗಸಭೆ “ಯೆಕಟೇನ್ಬರ್ಗ್, ರಷ್ಯಾ”ದಲ್ಲಿ ನಡೆಯಿತು.
  • ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಅಭಿವೃದ್ದಿ ಹೊಂದುತ್ತಿರುವ ಅಥವಾ ಹೊಸ ಕೈಗಾರೀಕೃತ ರಾಷ್ಟ್ರಗಳು ಹಾಗೂ ಈ ಐದು ರಾಷ್ಟ್ರಗಳು ಜಿ-20 ಗ್ರೂಫ್ ಸದಸ್ಯ ರಾಷ್ಟ್ರಗಳು ಆಗಿವೆ.

ಮಾನವ ಸಹಿತಿ ಬಾಹ್ಯಕಾಶ ನೌಕೆಯನ್ನು ಯಶಸ್ವಿಯಾಗಿ ಉಡಾಯಿಸಿದ ಚೀನಾ

ಬಾಹ್ಯಕಾಶ ಕ್ಷೇತ್ರದಲ್ಲಿ ಚೀನಾ ದೇಶ ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ಚೀನಾವು ಮಾನವ ಸಹಿತ ಬಾಹ್ಯಾಕಾಶ ನೌಕೆಯನ್ನು ಅಂತರಿಕ್ಷಕ್ಕೆ ಕಳುಹಿಸಿದೆ. ಇಬ್ಬರು ಗಗನಯಾತ್ರಿಗಳಾದ ಜಿಂಗ್ ಹೈಪೆಂಗ್‌ (50), ಚೆಂಗ್ ಡಾಂಗ್ (37) ಅವರನ್ನು ಒಳಗೊಂಡ ‘ಶೆಂಝೌ–11’ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಉತ್ತರ ಚೀನಾದ ಜಿಯುಖ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಇದನ್ನು ಲಾಂಗ್‌ ಮಾರ್ಚ್–2ಎಫ್‌ ರಾಕೆಟ್ ಮೂಲಕ ಉಡಾವಣೆ ಮಾಡಲಾಯಿತು.

ಪ್ರಮುಖಾಂಶಗಳು:

  • ಈ ಇಬ್ಬರೂ ಗಗನಯಾತ್ರಿಗಳು ಟಿಯಾಂಗಾಂಗ್-2 (Tiangong-2 (Heavenly Palace 2)) ಬಾಹ್ಯಾಕಾಶ ಪ್ರಯೋಗಾಲಯದಲ್ಲಿ 30 ದಿನ ಇರಲಿದ್ದಾರೆ. ಇಷ್ಟೊಂದು ದೀರ್ಘ ಅವಧಿಗೆ ದೇಶದ ಗಗನಯಾತ್ರಿಗಳು ಬಾಹ್ಯಾಕಾಶ ಪ್ರಯೋಗಾಲಯದಲ್ಲಿ ತಂಗಲಿರುವುದು ಇದೇ ಮೊದಲು.
  • ಪ್ರಯೋಗಾಲಯದಲ್ಲಿ ಗಗನಯಾತ್ರಿಗಳು  ಬಾಹ್ಯಾಕಾಶ ತಂತ್ರಜ್ಞಾನ, ವಿಜ್ಞಾನ ಮತ್ತು ಎಂಜಿನಿಯರಿಂಗ್ ಪ್ರಯೋಗಗಳನ್ನು ನಡೆಸಲಿದ್ದಾರೆ.
  • ಇದೇ ಮೊದಲ ಬಾರಿಗೆ ಬಾಹ್ಯಕಾಶದಲ್ಲಿ ಅಲ್ಟ್ರಾಸೌಂಡ್ ಪರೀಕ್ಷೆಗಳನ್ನು ಕೈಗೊಳ್ಳಲಿದ್ದಾರೆ. ಅಲ್ಲದೇ ಬಾಹ್ಯಕಾಶದಲ್ಲಿ ಸಸ್ಯಗಳನ್ನು ಬೆಳೆಸುವ ಪ್ರಯೋಗವನ್ನು ಮಾಡಲಿದ್ದಾರೆ.
  • “ಶೆಂಝೌ–11’ ಚೀನಾದ ಆರನೇ ಮಾನವ ಸಹಿತ ಬಾಹ್ಯಕಾಶ ನೌಕೆ. ಈ ಮುಂಚೆ 2013 ರಲ್ಲಿ ಚೀನಾದ ಗಗನಯಾತ್ರಿಗಳು 15 ದಿನಗಳ ಕಾಲ ಬಾಹ್ಯಕಾಶದಲ್ಲಿ ತಂಗಿದ್ದರು.

ಗಗನಯಾತ್ರಿಗಳನ್ನು ಕಳುಹಿಸುವ ಸಲುವಾಗಿ ಬಾಹ್ಯಾಕಾಶ ಪ್ರಯೋಗಾಲಯ “ಟಿಯಾಂಗಾಂಗ್-2” ಚೀನಾ ಕಳೆದ ತಿಂಗಳು ಉಡಾವಣೆ ಮಾಡಿತ್ತು. ಸದ್ಯ ಅಮೆರಿಕ, ರಷ್ಯಾ ಮತ್ತು ಐರೋಪ್ಯ ಬಾಹ್ಯಾಕಾಶ ಸಂಸ್ಥೆಗಳು ಜಂಟಿಯಾಗಿ ಬಾಹ್ಯಾಕಾಶ ನಿಲ್ದಾಣ ಹೊಂದಿವೆ. ಇದಕ್ಕೆ ಪೈಪೋಟಿ ನೀಡುವುದು ಚೀನಾದ ಉದ್ದೇಶವಾಗಿದೆ. ಸದ್ಯ ಅಸ್ತಿತ್ವದಲ್ಲಿರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಾಲಾವಧಿ 2024ಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ, ಚೀನಾದ ಪ್ರಯತ್ನ ಯಶಸ್ವಿಯಾದಲ್ಲಿ 2024ರ ನಂತರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಹೊಂದಿರುವ ಏಕೈಕ ರಾಷ್ಟ್ರ ಎಬ ಹೆಗ್ಗಳಿಕೆ ಆ ರಾಷ್ಟ್ರದ್ದಾಗಲಿದೆ.

Leave a Comment

This site uses Akismet to reduce spam. Learn how your comment data is processed.