ಸುಲಭ ವಹಿವಾಟು ವಿಶ್ವ ಸೂಚ್ಯಂಕ ಪಟ್ಟಿಯಲ್ಲಿ ಭಾರತಕ್ಕೆ 100ನೇ ಸ್ಥಾನ

ವಿಶ್ವ ಬ್ಯಾಂಕ್ ಇತ್ತೀಚೆಗೆ ಬಿಡುಗಡೆ ಮಾಡಿರುವ “ಡುಯಿಂಗ್ ಬ್ಯುಸಿನೆಸ್ (ಡಿಬಿ) 2018: ರಿಪಾರ್ಮಿಂಗ್ ಟು ಕ್ರಿಯೆಟ್ ಜಾಬ್ಸ್” ಶೀರ್ಷಿಕೆಯ ವರದಿಯಲ್ಲಿ 190 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 100ನೇ ಸ್ಥಾನವನ್ನು ಪಡೆದುಕೊಂಡಿದೆ. 2017 ಸುಲಭ ವಹಿವಾಟು ವಿಶ್ವ ಸೂಚ್ಯಂಕ ಪಟ್ಟಿಯಲ್ಲಿ 130ನೇ ಸ್ಥಾನದಿಂದ 30 ಸ್ಥಾನ ಏರಿಕೆ ಕಾಣುವ ಮೂಲಕ 100 ನೇ ಸ್ಥಾನವನ್ನು ಭಾರತ ಪಡೆದುಕೊಂಡಿದೆ. ಗಳಿಸಲು ಭಾರತವು 30 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗಳಿಸಿದೆ. ಇದರ ಸ್ಕೋರ್ ಕೂಡ 2 ರಲ್ಲಿ 56.05 ಕ್ಕೆ ಏರಿದೆ.

ಸುಲಭ ವಹಿವಾಟು ಸೂಚ್ಯಂಕ (Ease of Doing Business):

ಸುಲಭ ವಹಿವಾಟು ಸೂಚ್ಯಂಕದಲ್ಲಿ 10 ಮಾನದಂಡಗಳನ್ನು ಆಧರಿಸಿ ವಿಶ್ವದ 190 ರಾಷ್ಟ್ರಗಳ ಆರ್ಥಿಕತೆಯನ್ನು ಲೆಕ್ಕಹಾಕಿ ಪ್ರತಿವರ್ಷ ಸೂಚ್ಯಂಕವನ್ನು ವಿಶ್ವಬ್ಯಾಂಕ್ ಹೊರತರುತ್ತದೆ.

            ಈ 10 ಮಾನದಂಡಗಳೆಂದರೆ ವ್ಯವಹಾರವನ್ನು ಪ್ರಾರಂಭಿಸುವುದು, ನಿರ್ಮಾಣ ಪರವಾನಗಿಯನ್ನು ನಿರ್ವಹಿಸುವುದು, ವಿದ್ಯುತ್ ಪಡೆಯುವುದು, ಆಸ್ತಿಯನ್ನು ನೋಂದಾಯಿಸುವುದು, ಸಾಲ ಪಡೆಯುವುದು, ಸಣ್ಣ ಹೂಡಿಕೆದಾರರ ಹಿತರಕ್ಷಣೆ ಕಾಯುವುದು, ತೆರಿಗೆ ಪಾವತಿಸುವುದು, ದಿವಾಳಿತನ ಪರಿಹಾರ ಮತ್ತು ಒಪ್ಪಂದಗಳನ್ನು ಜಾರಿಗೊಳಿಸುವುದು. ದಿವಾಳಿತನ ಪರಿಹಾರದಲ್ಲಿ ಭಾರತ 103ನೇ ಸ್ಥಾನವನ್ನು ಪಡೆದುಕೊಂಡಿದೆ. ತೆರಿಗೆ ಪಾವತಿ ವಿಭಾಗದಲ್ಲಿ 119ನೇ ಸ್ಥಾನ, ಸಾಲ ಪಡೆಯುವ ವಿಭಾಗದಲ್ಲಿ 29ನೇ ಸ್ಥಾನ, ಸಣ್ಣ ಹೂಡಿಕೆದಾರರನ್ನು ರಕ್ಷಿಸುವ ವಿಭಾಗದಲ್ಲಿ 4ನೇ ಸ್ಥಾನ ಮತ್ತು ನಿರ್ಮಾಣ ಪರವಾನಿಗೆಯಲ್ಲಿ 181ನೇ ಸ್ಥಾನವನ್ನು ಪಡೆದುಕೊಂಡಿದೆ.

ಪ್ರಮುಖಾಂಶಗಳು:

  • ಈ ಬಾರಿ ಸೂಚ್ಯಂಕದಲ್ಲಿ ಗಣನೀಯ ಸಾಧನೆ ಮಾಡಿರುವ ಹತ್ತು ಟಾಪ್ ರಾಷ್ಟ್ರಗಳಾದ ಬ್ರೂನಿ, ದರುಸಲೇಂ, ಥೈಲ್ಯಾಂಡ್, ಮಲಾವಿ, ಕೊಸೊವೊ, ಉಜ್ಬೇಕಿಸ್ತಾನ್, ಜಾಂಬಿಯಾ, ನೈಜೀರಿಯಾ, ಜಿಬೌಟಿ ಮತ್ತು ಎಲ್ ಸಾಲ್ವಡಾರ್ ದೇಶಗಳಲ್ಲಿ ಪಟ್ಟಿಯಲ್ಲಿ ಭಾರತ ಸಹ ಸ್ಥಾನ ಪಡೆದುಕೊಂಡಿದೆ.
  • ದಕ್ಷಿಣ ಏಷ್ಯಾ ಮತ್ತು ಬ್ರಿಕ್ಸ್ ರಾಷ್ಟ್ರಗಳ ಪೈಕಿ ಸುಲಭ ವಹಿವಾಟು ಸೂಚ್ಯಂಕದಲ್ಲಿ ಉತ್ತಮ ಸಾಧನೆ ಮಾಡಿರುವ ಏಕೈಕ ರಾಷ್ಟ್ರ ಭಾರತ.
  • ದಕ್ಷಿಣ ಏಷ್ಯಾ ರಾಷ್ಟ್ರಗಳ ಪಟ್ಟಿಯಲ್ಲಿ ಅತ್ಯುತ್ತಮ ಸುಧಾರಣೆ ಕಂಡಿದ್ದರು ಭೂತಾನ್ (75) ಗಿಂತ ಕಡಿಮೆ ಶ್ರೇಯಾಂಕವನ್ನು ಭಾರತ ಪಡೆದುಕೊಂಡಿದೆ. ಉಳಿದಂತೆ ಭಾರತದ ನೆರೆಯ ರಾಷ್ಟ್ರಗಳಾದ ನೇಪಾಳ (105), ಶ್ರೀಲಂಕಾ (111), ಮಾಲ್ಡೀವ್ಸ್ (136), ಪಾಕಿಸ್ತಾನ (147), ಬಾಂಗ್ಲದೇಶ (177) ಮತ್ತು ಆಫ್ಗಾನಿಸ್ತಾನ (183) ಸ್ಥಾನವನ್ನು ಪಡೆದುಕೊಂಡಿವೆ.

ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (ತಿದ್ದುಪಡಿ) ಮಸೂದೆ, 2017 ಕೇಂದ್ರ ಸಚಿವ ಸಂಪುಟ್ಟ ಒಪ್ಪಿಗೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 1993ರ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಸಮ್ಮತಿಸಿದೆ. ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯಗಳು, ಇತರೆ ಉನ್ನತ ಶಿಕ್ಷಣ ಸಂಸ್ಥೆಗಳು  ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯ (ಎನ್‌ಸಿಟಿಇ) ಅನುಮತಿ ಪಡೆಯದೇ ನೀಡುತ್ತಿರುವ ಶಿಕ್ಷಕರ ಶಿಕ್ಷಣ ಕೋರ್ಸ್‌ಗಳಿಗೆ ಪೂರ್ವಾನ್ವಯವಾಗುವಂತೆ ಮಾನ್ಯತೆ ನೀಡುವುದು ಈ ಮಸೂದೆಯ ಉದ್ದೇಶವಾಗಿದೆ.

ಪ್ರಮುಖಾಂಶಗಳು:

  • ಈ ಸಂಸ್ಥೆಗಳಲ್ಲಿ ಅಥವಾ ವಿವಿಗಳಲ್ಲಿ ಕಲಿಯುತ್ತಿರುವ ಅಥವಾ ಈಗಾಗಲೇ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳಿಗೆ ಶಿಕ್ಷಕರಾಗಿ ನೌಕರಿ ಪಡೆಯಲು ಈ ತಿದ್ದುಪಡಿ ಅವಕಾಶ ನೀಡಲಿದೆ.
  • ಈ ಸಂಸ್ಥೆಗಳಲ್ಲಿ ಕೋರ್ಸ್‌ಗಳಿಗೆ ನೋಂದಣಿ ಮಾಡಿದ ಹಾಗೂ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಒಂದು ಬಾರಿಯ ಕ್ರಮವಾಗಿ ಪೂರ್ವಾನ್ವಯವಾಗುವಂತೆ ಮಾನ್ಯತೆ ನೀಡಲಾಗುವುದು.
  • ಇನ್ನು ಮುಂದೆ, B.Ed ಮತ್ತು D.El.Ed ನಂತಹ ಶಿಕ್ಷಕರ ಶಿಕ್ಷಣ ಕೋರ್ಸ್ಗಳನ್ನು ನಡೆಸುತ್ತಿರುವ ಎಲ್ಲಾ ಸಂಸ್ಥೆಗಳು NCTE ಯ ಸೆಕ್ಷನ್ 14ರ ಅಡಿಯಲ್ಲಿ NCTE ಯಿಂದ ಮನ್ನಣೆ ಪಡೆಯುವುದು ಕಡ್ಡಾಯ. ಇದಲ್ಲದೆ, ಅಂತಹ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳ/ ವಿಶ್ವವಿದ್ಯಾನಿಲಯಗಳ ಕೋಸರ್ಗಳು NCTE ಕಾಯ್ದೆಯ 15 ನೇ ಸೆಕ್ಷನ್ ಅಡಿಯಲ್ಲಿ ಅನುಮತಿ ಪಡೆಯಬೇಕು.

NCTE:

NCTE ಕಾಯಿದೆ 1993 ಸಂಸತ್ತು ಮೂಲಕ ಜಾರಿಗೊಳಿಸಲಾಗಿದ್ದು,  ಶಿಕ್ಷಕರ ಶಿಕ್ಷಣ ವ್ಯವಸ್ಥೆಯ ಯೋಜಿತ ಮತ್ತು ಸಮನ್ವಯವಾದ ಅಭಿವೃದ್ಧಿ, ನಿಯಂತ್ರಣ ಮತ್ತು ಸರಿಯಾದ ಗುಣಮಟ್ಟ ಖಚಿತಪಡಿಸಿಕೊಳ್ಳಲು ಜಾರಿಗೆ ತರಲಾಗಿದೆ. ಈ ಕಾಯಿದೆಯ ಅನ್ವಯ ರಾಷ್ಟ್ರೀಯ ಶಿಕ್ಷಕ ಶಿಕ್ಷಣ ಮಂಡಳಿಯನ್ನು ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದೆ.

ವಿಶೇಷ ಬ್ಯಾಂಕಿಂಗ್ ವ್ಯವಸ್ಥೆ ಮೂಲಕ ರಸಗೊಬ್ಬರ ಸಬ್ಸಿಡಿ ಪಾವತಿಸಲು ಒಪ್ಪಿಗೆ

2016–17ನೇ ಸಾಲಿನ ರಸಗೊಬ್ಬರ ಸಬ್ಸಿಡಿಯ ಬಾಕಿ ಮೊತ್ತ ₹ 10 ಸಾವಿರ ಕೋಟಿಯನ್ನು ಕಂಪೆನಿಗಳಿಗೆ ವಿಶೇಷ ಬ್ಯಾಂಕಿಂಗ್‌ ವ್ಯವಸ್ಥೆ ಮೂಲಕ ಪಾವತಿಸಲು ಕೇಂದ್ರ ಆರ್ಥಿಕ ವ್ಯವಹಾರ ಸಚಿವ ಸಂಪುಟ ಅನುಮತಿ ನೀಡಿದೆ.

ಪ್ರಮುಖಾಂಶಗಳು:

  • ಗೊಬ್ಬರ ತಯಾರಕರಿಂದ ಮತ್ತು ಆಮದು ಮೂಲಕ ಸಬ್ಸಿಡಿ ದರದಲ್ಲಿ ಸರ್ಕಾರ 21 ಗ್ರೇಡ್ ಪಿ & ಕೆ ರಸಗೊಬ್ಬರಗಳನ್ನು ಮತ್ತು ಯೂರಿಯಾವನ್ನು ರೈತರಿಗೆ ಸರಬರಾಜು ಮಾಡುತ್ತಿದೆ. ರಸಗೊಬ್ಬರ ತಯಾರಿಕ ಸಂಸ್ಥೆಗಳಿಗೆ ಸಬ್ಸಿಡಿ ಮೊತ್ತವನ್ನು ಸಕಾಲದಲ್ಲಿ ಪಾವತಿಸಲು ಕೇಂದ್ರ ಹಣಕಾಸು ಸಚಿವಾಲಯ ರೂ 10 ಸಾವಿರ ಕೋಟಿಗೆ ವಿಶೇಷ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸ್ಥಾಪಿಸಲು ನಿರ್ಧರಿಸಿತ್ತು.
  • ಅದರಂತೆ, ವಿಶೇಷ ಬ್ಯಾಂಕಿಂಗ್ ವ್ಯವಸ್ಥೆಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಯೊಂದಿಗೆ ರಸಗೊಬ್ಬರ ಸಂಸ್ಥೆಗಳಿಗೆ ರೂ 10,000 ಕೋಟಿ ಸಬ್ಸಿಡಿ ಮೊತ್ತವನ್ನು ಪೂರೈಸಲಿದೆ.

ಇಂದ್ರಾ 2017: ಭಾರತ-ರಷ್ಯಾ ನಡುವೆ ಮೂರು ಸೇವೆಗಳ ಜಂಟಿ ಸಮರಾಭ್ಯಾಸ ಮುಕ್ತಾಯ

ಭಾರತ ಮತ್ತು ರಷ್ಯಾ ನಡುವಿನ ಮೂರು ಸೇವೆಗಳ ಜಂಟಿ ಸಮರಾಭ್ಯಾಸ “ಇಂದ್ರಾ 2017” ರಷ್ಯಾದ ಪೂರ್ವ ತೀರದಲ್ಲಿರುವ ಮತ್ತು ಪೆಸಿಫಿಕ್ ಸಾಗರದ ಮುಖ್ಯ ಬಂದರು ನಗರವಾಗಿರುವ ವ್ಲಾಡಿವೋಸ್ಟೋಕ್‍ನಲ್ಲಿ ಅಕ್ಟೋಬರ್ 19 ರಿಂದ ಅಕ್ಟೋಬರ್ 29 ರವರೆಗೆ ಯಶಸ್ವಿಯಾಗಿ ನಡೆಯಿತು. ಇದೇ ಮೊದಲ ಬಾರಿಗೆ ರಷ್ಯಾ ತನ್ನ ನೆಲದಲ್ಲಿ ಮೂರು ಸೇವೆಗಳ ಕಾರ್ಯಾಚರಣೆಯನ್ನು ಹಮ್ಮಿಕೊಂಡಿತ್ತು. ‘Preparation and Conduct of Operations by Joint Force for Suppression of International Terror Activity at the request of a host country under UN mandate ಇದು ಈ ವರ್ಷದ ಥೀಮ್.

  • ಈ ಸಮರಾಭ್ಯಾದಲ್ಲಿ ಭಾರತದ ಮೂರೂ ಸಶಸ್ತ್ರ ಪಡೆಗಳಾದ ಭೂಸೇನೆ, ವಾಯುಸೇನೆ ಮತ್ತು ನೌಕಾ ಸೇನೆಯ 400ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದು, ರಷ್ಯಾದ ಸೇನೆಯ ಸಾವಿರ ತುಕಡಿಗಳು ಈ ಅಭ್ಯಾಸದಲ್ಲಿ ಪಾಲ್ಗೊಂಡಿವೆ.
  • ಕಾರ್ಯಕ್ರಮದ ಆರಂಭದ ಅಂಗವಾಗಿ ನಡೆದ ಆಕರ್ಷಕ ಪಥಸಂಚಲನದಲ್ಲಿ ಎರಡೂ ರಾಷ್ಟ್ರಗಳ ಭೂ ಸೇನೆ, ವಾಯು ಸೇನೆ ಹಾಗೂ ನೌಕಾಪಡೆಗಳ ಸೈನಿಕರು ಜತೆಯಾಗಿ ಸಾಗಿದರು. ಬಳಿಕ ಭಾರತೀಯ ಯೋಧರಿಂದ ಸಾಂಪ್ರದಾಯಿಕ ಸಾಹಸ ಕಲೆಗಳ ಪ್ರದರ್ಶನ ಮತ್ತು ಕಲಾವಿದರಿಂದ ಸಾಂಸ್ಕೃತಿಕ ಪ್ರದರ್ಶನ ನಡೆದವು.
  • ಭಾರತೀಯ ಸೇನೆಯಿಂದ 450 ಸಿಬ್ಬಂದಿ ಹಾಗೂ ರಷ್ಯಾದ ಕಡೆಯಿಂದ 1000ಕ್ಕೂ ಹೆಚ್ಚು ಸೇನಾ ತುಕಡಿಗಳು ಪಾಲ್ಗೊಂಡಿವೆ. ಉಭಯ ದೇಶಗಳ ಗಡಿಗಳಲ್ಲಿ ಆಗುತ್ತಿರುವ ಅಕ್ರಮ ಒಳನುಸುಳುವಿಕೆಯಂಥ ಪ್ರಯತ್ನಗಳನ್ನು ನಿಗ್ರಹಿಸುವ ಬಗ್ಗೆ ಈ ಸಮರಾಭ್ಯಾಸದಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
  • “ಭಾರತ ಹಾಗೂ ರಷ್ಯಾಗಳು ತಮ್ಮ ಗಡಿ ಭಾಗಗಳಲ್ಲಿ ಒಂದೇ ತೆರನಾದ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಮರಾಭ್ಯಾಸ ನಡೆಸಲಾಗುತ್ತಿದೆ. ಇದು ಎರಡೂ ರಾಷ್ಟ್ರಗಳ ಸೈನಿಕರು ಈ ಸಮಸ್ಯೆಗಳನ್ನು ಎದುರಿಸುವಲ್ಲಿ ಪಡೆದಿರುವ ಅನುಭವ, ಜ್ಞಾನವನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತದೆ.

ಹಿನ್ನಲೆ:

ಇಂದ್ರ ಸಮರಾಭ್ಯಾಸವನ್ನು 2003 ರಿಂದ ಆಯೋಜಿಸಲಾಗುತ್ತಿದೆ. ಇಂದ್ರ ಎಂದರೆ INDia ಮತ್ತು RussiA ಎಂದರ್ಥ.

ಎಥನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮದಡಿ ಎಥನಾಲ್ ಬೆಲೆ ಪರಿಷ್ಕರಣಿಗೆ ಸಂಪುಟ ಒಪ್ಪಿಗೆ

ಎಥನಾಲ್ ಮಿಶ್ರಿತ ಪೆಟ್ರೋಲ್ (ಇಬಿಪಿ) ಯೋಜನೆಯಡಿಯಲ್ಲಿ ಎಥೆನಾಲ್ ಅನ್ನು ಸಾರ್ವಜನಿಕ ವಲಯ ತೈಲ ಮಾರುಕಟ್ಟೆ ಸಂಸ್ಥೆಗಳಿಗೆ ಪೂರೈಸಲು ಎಥನಾಲ್ ಬೆಲೆ ಪರಿಷ್ಕರಣೆಗೆ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ (ಸಿಸಿಇಎ) ಅನುಮೋದನೆ ನೀಡಿದೆ. ಪರಿಷ್ಕೃತ ಬೆಲೆ ಪ್ರಕಾರ ಪ್ರತಿ ಲೀಟರ್ ಎಥೆನಾಲ್ ಗೆ ರೂ 40.85 ನಿಗದಿ ಪಡಿಸಲಾಗಿದೆ. ಜಿಎಸ್ಟಿ ಮತ್ತು ಸಾರಿಗೆ ವೆಚ್ಚ ಹೆಚ್ಚುವರಿಯಾಗಿ ಪಾವತಿಸಲಾಗುವುದು.

ಹಿನ್ನಲೆ:

ಎಥೆನಾಲ್ ಅನ್ನು ಸಮರ್ಪಕವಾಗಿ ಸರಬರಾಜು ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ 2014 ಡಿಸೆಂಬರ್ ನಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮದಡಿ ಎಥೆನಾಲ್ ಬೆಲೆ ಪರಿಷ್ಕರಣೆ ಜಾರಿಗೆ ತಂದಿದೆ. ಅದರಂತೆ 2014-15 ಮತ್ತು 2015-16 ರ ಅವಧಿಯಲ್ಲಿ ತೆರಿಗೆ ಮತ್ತು ಸಾರಿಗೆ ವೆಚ್ಚ ಸೇರಿ ಎಥೆನಾಲ್ ಅನ್ನು ರೂ 48.50 ರಿಂದ ರೂ 49.50 ಬೆಲೆಯನ್ನು ಸರ್ಕಾರವು ನಿಗದಿಪಡಿಸಿದತ್ತು. ಇದರ ಪ್ರತಿಫಲವಾಗಿ 2013-14 ರಲ್ಲಿ 38 ಕೋಟಿ ಲೀಟರ್ ನಷ್ಟಿದ್ದ ಎಥೆನಾಲ್ ಸರಬರಾಜು 2015-16 ರಲ್ಲಿ 111 ಕೋಟಿ ಲೀಟರ್ ಏರಿಕೆ ಕಂಡಿತ್ತು.

ಎಥೆನಾಲ್ ಮಿಶ್ರಣ:

ಪೆಟ್ರೋಲ್ ನೊಂದಿಗೆ ಎಥೆನಾಲ್ ಅನ್ನು ಬೆರೆಸುವ ವಿಧಾನವನ್ನು ಎಥೆನಾಲ್ ಮಿಶ್ರಿತ ಪೆಟ್ರೋಲ್ ಎನ್ನಲಾಗುತ್ತದೆ. ಈ ಮಿಶ್ರಣವನ್ನು ಎಥೆನಾಲ್ ಇಂಧನ ಅಥವಾ ಗ್ಯಾಸೊಹಾಲ್ ಎನ್ನಲಾಗುವುದು. ಇದೊಂದು ಅರೆ ನವೀಕರಿಸಬಹುದಾದ ಇಂಧನ. ಎಥೆನಾಲ್ ಒಂದು ಜೈವಿಕ ಇಂಧನವಾಗಿದ್ದು ಕಬ್ಬಿನ ತ್ಯಾಜ್ಯ, ಜೋಳ ಮತ್ತು ಸೋರ್ಗಮ್ ಇತ್ಯಾದಿಗಳಿಂದ ತಯಾರಿಸಲಾಗುವುದು.

            ಭಾರತದಲ್ಲಿ ಎಥೆನಾಲ್ ಮಿಶ್ರಣ ಕಾರ್ಯಕ್ರಮವನ್ನು 2001 ರಿಂದ ಪರಿಚಯಿಸಲಾಗಿದೆ. ವಾಹನ ಇಂಧನ ನೀತಿ 2003 ರಲ್ಲಿ ಮೊದಲ ಬಾರಿಗೆ ಎಥೆನಾಲ್ ಮಿಶ್ರಣವನ್ನು ಉಲ್ಲೇಖಿಸಲಾಗಿದೆ. ರಾಷ್ಟ್ರೀಯ ಜೈವಿಕ ಇಂಧನ ನೀತಿ-2009ರ ಅನ್ವಯ ಎಲ್ಲಾ ತೈಲ ಕಂಪನಿಗಳು ಶೇ 5% ಎಥೆನಾಲ್ ಅನ್ನು ಪೆಟ್ರೋಲ್ ನೊಂದಿಗೆ ಮಿಶ್ರಣ ಮಾಡುವುದು ಕಡ್ಡಾಯವಾಗಿದೆ.

2 Thoughts to “ಪ್ರಚಲಿತ ವಿದ್ಯಮಾನಗಳು-ನವೆಂಬರ್,2,2017”

  1. Raghavendra M

    Good information’s sir pls keep this updates on daily basis don’t miss it.

  2. Muttappa halakeri

    ಸೂಪರ್ sir

Leave a Comment

This site uses Akismet to reduce spam. Learn how your comment data is processed.