ಸೂರ್ಯನ ಅಧ್ಯಯನಕ್ಕೆ 2018ರಲ್ಲಿ ನಾಸಾದಿಂದ ಪಾರ್ಕರ್ ನೌಕೆ

ಸೂರ್ಯನ ರಹಸ್ಯ ಭೇದಿಸಲು ನಾಸಾ ಸಜ್ಜಾಗಿದ್ದು, ಐತಿಹಾಸಿಕ ಪಾರ್ಕರ್ ಸೌರ ಪ್ರೋಬ್ ಮಿಷನ್ ಅನ್ನು 2018ರಲ್ಲಿ ಆರಂಭಿಸುವುದಾಗಿ ಹೇಳಿದೆ. ಸೂರ್ಯನಲ್ಲಾಗುವ ಬದಲಾವಣೆಯನ್ನು ಬಗ್ಗೆ ಗ್ರಹಿಸುವಲ್ಲಿ ಇದು ಪ್ರಮುಖ ಪಾತ್ರವಹಿಸಲಿದೆ. ಸೂರ್ಯನಲ್ಲಿ ಬದಲಾಗುವ ಪರಿಸ್ಥಿತಿಗಳು ಸೌರಮಂಡಲದೊಳಗೆ ಹರಡಿ ಭೂಮಿಯ ಮೇಲೆ ಮತ್ತು ಇತರ ಗ್ರಹಗಳ ಮೇಲೆ ಪರಿಣಾಮ ಬೀರುವುದರಿಂದ ಈ ಬಗ್ಗೆ ಅಧ್ಯಯನ ನಡೆಸುವುದು ಮಹತ್ವವೆನಿಸಿದೆ. ಪಾರ್ಕರ್ ನೌಕೆ ಈ ಮುಂಚಿನ ಯಾವುದೇ ಬಾಹ್ಯಾಕಾಶ ನೌಕೆಗಿಂತ ಸೂರ್ಯನ ಹತ್ತಿರಕ್ಕೆ ಚಲಿಸಲಿದ್ದು, ಅತಿಯಾದ  ಶಾಖ ಮತ್ತು ವಿಕಿರಣ ಪರಿಸ್ಥಿತಿಗಳನ್ನು ಎದುರಿಸಿ ಅಧ್ಯಯನ ನಡೆಸಲಿದೆ.

            60 ವರ್ಷಗಳ ಹಿಂದೆಯೇ ಸೌರ ಮಾರುತದ ಇರುವಿಕೆಯನ್ನು ಸೂಚಿಸಿದ್ದ ಖಗೋಳಶಾಸ್ತ್ರಜ್ಞ ಯುಗೀನ್‌ ಪಾರ್ಕರ್‌ ಅವರ ಗೌರವಾರ್ಥ ‘ಪಾರ್ಕರ್‌ ಸೌರ ಶೋಧನಾನೌಕೆ’ ಎಂದು ಹೆಸರಿಸಿರುವುದಾಗಿ ನಾಸಾ ತಿಳಿಸಿದೆ.

ಈ ನೌಕೆಯು 2500 ಡಿಗ್ರಿ ಪ್ಯಾರಾನಿಟ್‌ ಉಷ್ಣತೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದರಿಂದ ಸೂರ್ಯನ ಪ್ರಭಾವಲಯದಲ್ಲಿ ಹೆಚ್ಚು ಉಷ್ಣತೆ, ಶಾಖ ಹೊಂದಿರುವ ಹಿಂದಿನ ರಹಸ್ಯವನ್ನು ತಿಳಿಯಲೂ ಸಾಧ್ಯವಾಗಲಿದೆ. 4.5 ಇಂಚು ಕಾರ್ಬನ್‌ ಸಂಯೋಜಿತ ರಕ್ಷಣಾ ಕವಚವನ್ನು ಪಾರ್ಕರ್‌ ನೌಕೆ ಹೊಂದಿರಲಿದ್ದು ಅತಿ ತಾಪವನ್ನು ತಡೆದು ಶೋಧನಾಕಾರ್ಯ ನಡೆಸಲಿದೆ.

ಸೂರ್ಯ ಮತ್ತು ಸೌರ ಮಾರುತದ ಅಧ್ಯಯನವೇಕೆ?

  • ನಾವು ಹತ್ತಿರದಿಂದ ಅಧ್ಯಯನ ಮಾಡಬಹುದಾದ ಏಕೈಕ ನಕ್ಷತ್ರ ಸೂರ್ಯ. ಈ ನಕ್ಷತ್ರವನ್ನು ಅಧ್ಯಯನ ಮಾಡುವುದರ ಮೂಲಕ ನಾವು ವಿಶ್ವದ ನಕ್ಷತ್ರಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದು.
  • ಸೂರ್ಯ ಭೂಮಿಯ ಮೇಲೆ ಬೆಳಕು ಮತ್ತು ಉಷ್ಣತೆಯ ಮೂಲವಾಗಿದೆ. ಸೂರ್ಯನ ಬಗ್ಗೆ ಹೆಚ್ಚು ತಿಳಿಯುವ ಮೂಲಕ ಭೂಮಿಯಲ್ಲಿ ಹೇಗೆ ಜೀವಿಗಳ ಅಭಿವೃದ್ಧಿಯಾಯಿತು ಎಂಬುದನ್ನು ನಾವು ಹೆಚ್ಚು ಅರ್ಥಮಾಡಿಕೊಳ್ಳಬಹುದು.
  • ಸೂರ್ಯನಲ್ಲಿನ ಚಟುವಟಿಕೆ ಭೂಮಿಯ ಮೇಲೆ ಪರಿಣಾಮ ಬೀರುತ್ತದೆ. ಇದು ಸೌರ ಮಾರುತದ ಮೂಲವಾಗಿದೆ. ಸೌರ ಮಾರುತವು ಸೂರ್ಯನಿಂದ ಅಯಾನೀಕರಿಸಿದ ಅನಿಲಗಳ ಹರಿವಾಗಿದ್ದು, ಭೂಮಿಯ ಮೇಲೆ ಪ್ರತಿ ಸೆಕೆಂಡಿಗೆ 500 ಕಿ.ಮೀ ವೇಗದಲ್ಲಿ (ಪ್ರತಿ ಗಂಟೆಗೆ ಒಂದು ಮಿಲಿಯನ್ ಮೈಲುಗಳು) ವೇಗದಲ್ಲಿ ಹರಿಯುತ್ತದೆ.
  • ಸೌರ ಮಾರುತದಲ್ಲಾಗುವ ಬದಲಾವಣೆಗಳು ಭೂಮಿಯ ಕಾಂತೀಯ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತದೆ ಮತ್ತು ವಿಕಿರಣ ಪಟ್ಟಿ (Radiation Belt)ಯೊಳಗೆ ಶಕ್ತಿಯನ್ನು ತುಂಬುತ್ತದೆ.
  • ಸೌರ ಮಾರುತವು ಸೌರ ವ್ಯವಸ್ಥೆಯನ್ನು ಹೆಚ್ಚು ಆವರಿಸಿಕೊಂಡಿದೆ. ನಾವು ಬಾಹ್ಯಾಕಾಶ ನೌಕೆ ಮತ್ತು ಗಗನಯಾತ್ರಿಗಳನ್ನು ನಭಕ್ಕೆ ಕಳುಹಿಸುವ ಮೊದಲು ಸೌರ ವ್ಯವಸ್ಥೆಯನ್ನು ಮೊದಲು ಅರ್ಥಮಾಡಿಕೊಳ್ಳಬೇಕಿದೆ.

 

ICCR ಅಧ್ಯಕ್ಷರಾಗಿ ವಿನಯ್ ಸಹಸ್ರಬುದ್ದೆ ನೇಮಕ

ಸಂಸದ ವಿನಯ್ ಸಹಸ್ರಬುದ್ದೆ ಅವರನ್ನು ಭಾರತೀಯ ಕೌನ್ಸಿಲ್ ಆಫ್ ಕಲ್ಚರಲ್ ರಿಲೇಶನ್ಸ್ (ಐಸಿಸಿಆರ್) ಅಧ್ಯಕ್ಷರಾಗಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರು ನೇಮಿಸಿದ್ದಾರೆ.

ಐಸಿಸಿಆರ್ (ICCR):

ಐಸಿಸಿಆರ್ ಭಾರತದ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದ್ದು, ಭಾರತದ ಬಾಹ್ಯ ಸಂಸ್ಕೃತಿಯನ್ನು ಇತರ ದೇಶಗಳೊಂದಿಗೆ ಮತ್ತು ಅದರ ಜನರೊಂದಿಗೆ ವಿನಿಮಯ ಮಾಡಿಕೊಳ್ಳುವ ಮೂಲಕ ಸಂಬಂಧಗಳನ್ನು ಬಲಪಡಿಸುವ ಕಾರ್ಯವನ್ನು ಮಾಡುತ್ತಿದೆ. ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ಐಸಿಸಿಆರ್) ಅನ್ನು 1950 ರಲ್ಲಿ ಸ್ವತಂತ್ರ ಭಾರತದ ಮೊದಲ ಶಿಕ್ಷಣ ಮಂತ್ರಿ ಮೌಲಾನಾ ಅಬುಲ್ ಕಲಾಮ್ ಆಜಾದ್ ಅವರು ಸ್ಥಾಪಿಸಿದರು.

ಐಸಿಸಿಆರ್ ಧ್ಯೇಯ:

ಭಾರತದ ಬಾಹ್ಯ ಸಾಂಸ್ಕೃತಿಕ ಸಂಬಂಧಗಳಿಗೆ ಸಂಬಂಧಿಸಿದ ನೀತಿಗಳು ಮತ್ತು ಕಾರ್ಯಕ್ರಮಗಳ ಸೂತ್ರೀಕರಣ ಮತ್ತು ಅನುಷ್ಠಾನದಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಇದರ ಗುರಿಯಾಗಿದೆ. ಭಾರತ ಮತ್ತು ಇತರ ದೇಶಗಳ ನಡುವಿನ ಸಾಂಸ್ಕೃತಿಕ ಸಂಬಂಧಗಳು ಮತ್ತು ಪರಸ್ಪರ ಸಹಕಾರ ಬೆಳೆಸುವುದು ಮತ್ತು ಬಲಪಡಿಸುವುದು. ಇತರ ದೇಶಗಳು ಮತ್ತು ಜನರೊಂದಿಗೆ ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸುವುದು ಮತ್ತು ರಾಷ್ಟ್ರಗಳೊಂದಿಗೆ ಸಂಬಂಧಗಳನ್ನು ಬೆಳೆಸುವುದು.

 

FAME ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ತೇಜನಕ್ಕೆ ಬೆಂಗಳೂರು ಆಯ್ಕೆ

ಫೇಮ್ ಇಂಡಿಯಾ ಸಬ್ಸಿಡಿ ಯೋಜನೆಯಡಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಕೇಂದ್ರ ಭಾರಿ ಕೈಗಾರಿಕೆ ಇಲಾಖೆ ಕರ್ನಾಟಕಕ್ಕೆ ಅನುಮೋದನೆ ನೀಡಿದೆ.  ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ಉದ್ದೇಶಕ್ಕಾಗಿ ಬೆಂಗಳೂರು ಸೇರಿದಂತೆ ದೇಶದ 11 ನಗರಗಳನ್ನು ಆಯ್ಕೆ ಮಾಡಿದೆ.

            ಈ ಯೋಜನೆಯಡಿ ಕರ್ನಾಟಕ ಸರ್ಕಾರ 40 ಎಲೆಕ್ಟ್ರಿಕ್ ಬಸ್, 100 ನಾಲ್ಕು ಚಕ್ರ ವಾಹನಗಳು, 500 ತ್ರಿಚಕ್ರ ವಾಹನಗಳನ್ನು ಗರಿಷ್ಠ ಶೇ 60% ಸಬ್ಸಿಡಿ ದರದಲ್ಲಿ ಖರೀದಿ ಮಾಡಲಿದೆ. ರಾಜಧಾನಿ ಬೆಂಗಳೂರಿನದ್ಯಾಂತ ಎಲೆಕ್ಟ್ರಿಕ್ ಚಾರ್ಜರ್ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ಸಹ ಸಬ್ಸಿಡಿ ನೆರವನ್ನು ನೀಡಲಾಗುವುದು. ಎಲೆಕ್ಟ್ರಿಕ್ ವಾಹನಗಳು ಪರಿಸರ ರಕ್ಷಣೆ, ಇಂಧನ ಉಳಿತಾಯ ಹಾಗೂ ಸಾವರ್ಜನಿಕ ಆರೋಗ್ಯ ಸುಧಾರಣೆ ಮಾಡುವಲ್ಲಿ ಮಹತ್ವದ ಪಾತ್ರವಹಿಸಲಿವೆ.

ಫೇಮ್ (FAME) ಇಂಡಿಯಾ ಯೋಜನೆ:

ಫಾಸ್ಟರ್‌ ಅಡಾಪ್ಷನ್‌ ಅಂಡ್‌ ಮೆನ್ಯುಫ್ಯಾಕ್ಚರಿಂಗ್‌ ಆಫ್‌ ಹೈಬ್ರಿಡ್‌ ಅಂಡ್‌ ಎಲೆಕ್ಟ್ರಿಕ್‌ ವೆಹಿಕಲ್ಸ್‌ ಇನ್‌ ಇಂಡಿಯಾ’ (ಫೇಮ್‌ ಇಂಡಿಯಾ) ಯೋಜನೆಯನ್ನು 2015ರಲ್ಲಿ ನ್ಯಾಷನಲ್ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್ ಅಡಿಯಲ್ಲಿ ಆರಂಭಿಸಲಾಯಿತು. ಪರಿಸರ ಸ್ನೇಹಿ ವಾಹನಗಳನ್ನು ಅಭಿವೃದ್ದಿಪಡಿಸುವುದು ಯೋಜನೆಯ ಪ್ರಮುಖ ಉದ್ದೇಶ. ಭಾರಿ ಕೈಗಾರಿಕ ಇಲಾಖೆ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.

            ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನದ ತಯಾರಿಕೆ ಮತ್ತು ಮಾರುಕಟ್ಟೆಯ ಸೃಷ್ಟಿಗಾಗಿ ಆರ್ಥಿಕ ಮತ್ತು ಹಣಕಾಸಿನ ಪ್ರೋತ್ಸಾಹವನ್ನು ಒದಗಿಸುವುದು ಯೋಜನೆಯ ಉದ್ದೇಶವಾಗಿದೆ. ದ್ವಿಚಕ್ರ ವಾಹನಗಳು, ತ್ರಿ ಚಕ್ರ ವಾಹನಗಳು, ನಾಲ್ಕು-ಚಕ್ರದ ಪ್ರಯಾಣಿಕ ವಾಹನಗಳು ಸೇರಿದಂತೆ ಎಲ್ಲ ವಾಹನ ವಿಭಾಗಗಳನ್ನು ಉತ್ತೇಜಿಸುವ ಗುರಿ ಹೊಂದಿದೆ.

ರಾಜೀಂದರ್ ಖನ್ನ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ನೇಮಕ

ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW)ನ ನಿವೃತ್ತ ಮುಖ್ಯಸ್ಥ ರಾಜೀಂದರ್ ಖನ್ನ ರವರನ್ನು ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಕೇಂದ್ರ ನೇಮಕಾತಿ ಸಚಿವ ಸಂಪುಟ ನೇಮಕ ಮಾಡಿದೆ. ನಿಶ್ಚಿತ ಅಧಿಕಾರಾವಧಿ ಅವಧಿಗೆ ಇವರನ್ನು ನೇಮಕ ಮಾಡಲಾಗಿದ್ದು,  ಮುಂದಿನ ಆದೇಶದ ವರೆಗೆ ಈ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ಖನ್ನ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದಾವಲ್ ಅವರಿಗೆ ಅಗತ್ಯ ಸಹಾಯವನ್ನು ನೀಡಲಿದ್ದಾರೆ.

ರಾಜೀಂದರ್ ಖನ್ನ:

  • ಖನ್ನ ಅವರು 1978ನೇ ಬ್ಯಾಚಿನ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ಕೇಡರ್ ಅಧಿಕಾರಿ.
  • ಡಿಸೆಂಬರ್ 2014 ರಿಂದ ಎರಡು ವರ್ಷಗಳ ಕಾಲ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.
  • ಖನ್ನ ಅವರು RAWನಲ್ಲಿ ಭಯೋತ್ಪಾದನಾ-ವಿರೋಧಿ ಘಟಕದ ಪಿತಾಮಹ ಎನಿಸಿದ್ದಾರೆ. ಈ ಪತ್ತೇದಾರಿ ಸಂಸ್ಥೆಯಲ್ಲಿ ಅನೇಕ ಭಯೋತ್ಪಾದನಾ ಕಾರ್ಯಾಚರಣೆಗಳನ್ನು ನಡೆಸಿದ್ದಾರೆ. ಮುಖ್ಯವಾಗಿ ಪಾಕಿಸ್ತಾನ ಮತ್ತು ಇಸ್ಲಾಮಿಕ್ ಭಯೋತ್ಪಾದನೆ ವಿರುದ್ದ ನಡೆಸಿದ್ದಾರೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ:

ರಾಷ್ಟ್ರೀಯ ಭದ್ರತಾ ಸಲಹೆಗಾರರು ರಾಷ್ಟ್ರೀಯ ಭದ್ರತಾ ಮಂಡಳಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ. ಇವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಭದ್ರತೆಯ ಬಗ್ಗೆ ಪ್ರಧಾನ ಮಂತ್ರಿಯ ಪ್ರಾಥಮಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಾರೆ. ರಾ ಮತ್ತು ಇಂಟಲಿಜೆಲ್ಸಿ ಬ್ಯೂರೊಗಳು ತಮ್ಮ ವರದಿಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರ ಮೂಲಕ ಪ್ರಧಾನಿ ಅವರಿಗೆ ತಲುಪಿಸುತ್ತವೆ. ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರರು ಕರ್ತವ್ಯ ನಿರ್ವಹಣೆಯಲ್ಲಿ ನೆರವಾಗುತ್ತಾರೆ.

            1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಹುದ್ದೆಯನ್ನು ಮೊದಲ ಬಾರಿಗೆ ನೇಮಕ ಮಾಡಿತ್ತು. ಬಿಜೇಶ್ ಮಿಶ್ರಾ ರವರು ಭಾರತದ ಮೊದಲ ರಾಷ್ಟ್ರೀಯ ಭದ್ರತಾ ಸಲಹೆಗಾರರು.

 

ಬರಾಕ್ ಕ್ಷಿಪಣಿ, ಪಿಜಿಎಂ ಬಾಂಬ್ ಖರೀದಿಸಲು ರಕ್ಷಣಾ ಸಚಿವಾಲಯ ಒಪ್ಪಿಗೆ

ರಕ್ಷಣಾ ಸಚಿವಾಲಯ ಭಾರತೀಯ ನೌಕಪಡೆಗೆ  131 ಬರಾಕ್ ಕ್ಷಿಪಣಿ ಹಾಗೂ ಭಾರತೀಯ ವಾಯು ಪಡೆಗೆ 240 ನಿಖರ ಮಾರ್ಗದರ್ಶಿ ಶಸ್ತಾಸ್ತ್ರ (ಪಿಜಿಎಂ)ಗಳನ್ನು ಖರೀದಿಸಲು ಅಂತಿಮ ಅನುಮೋದನೆ ನೀಡಿದೆ. ಒಟ್ಟಾರೆ ರೂ 1714 ಕೋಟಿ ಖರೀದಿ ಒಪ್ಪಂದ ಇದಾಗಿದೆ. ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಪ್ರಸ್ತಾವನೆಗೆ ಅಂತಿಮ ಅನುಮತಿ ನೀಡಿದರು.

ನಿಖರ ಮಾರ್ಗದರ್ಶಿ ಶಸ್ತಾಸ್ತ್ರ (ಪಿಜಿಎಂ):

  • 240 KAB-1500 PGM ಗಳನ್ನು ರಷ್ಯಾದ ರೋಸೊಬೊರೊನೆಕ್ಸ್ಪೋರ್ಟ್ನಿಂದ 1,254 ಕೋಟಿ ವೆಚ್ಚದಲ್ಲಿ ಖರೀದಿಸಲಾಗುವುದು. PGM ಎಂಬುದು KAB PGM ಗಳಿಂಗಿತ ವಿಭಿನ್ನವಾಗಿದ್ದು, ಈಗಾಗಲೇ ಐಎಎಫ್ ಸೇವೆಯಲ್ಲಿದೆ ಮತ್ತು ಸು-30 ಫೈಟರ್ ಜೆಟ್ಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ.

ಬರಾಕ್ ಕ್ಷಿಪಣಿ:

131 ಬರಾಕ್ (Surface-to-air) ಕ್ಷಿಪಣಿಗಳು  ಮತ್ತು ಸಂಬಂಧಿತ ಸಲಕರಣೆಗಳನ್ನು ಇಸ್ರೇಲ್ನ ರಾಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್ ಲಿಮಿಟೆಡ್ನಿಂದ 460 ಕೋಟಿ ರೂಪಾಯಿಗಳಿಗೆ ಖರೀದಿಸಲಾಗುವುದು. ಇವುಗಳನ್ನು ಭಾರತೀಯ ನೌಕಾಪಡೆಯ ಎಲ್ಲಾ ಮುಂಚೂಣಿಯ ಯುದ್ಧನೌಕೆಗಳಲ್ಲಿ ಅಳವಡಿಸಲಾಗುವುದು.

ಗೋಧಿಯ ಉತ್ಪಾದನೆಯನ್ನು ಹೆಚ್ಚಿಸಲು ಪ್ರಪಂಚದ ಮೊದಲ ‘ವೇಗ ತಳಿ’ ತಂತ್ರ

ಆಸ್ಟ್ರೇಲಿಯಾದ ವಿಜ್ಞಾನಿಗಳು ವಿಶ್ವದ ಮೊದಲ ‘ವೇಗ ತಳಿ (Speed Breeding)’ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ, ಇದು ಬೆಳೆಯ ಉತ್ಪಾದನೆಯನ್ನು ಮೂರು ಪಟ್ಟು ಹೆಚ್ಚಿಸಲಿದೆ.

ವಿಜ್ಞಾನಿಗಳು ವೇಗ ತಳಿ ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ‘ಡಿಎಸ್ ಫ್ಯಾರಡೆ’ ಎಂಬ ಗೋಧಿ ತಳಯನ್ನು ಅಭಿವೃದ್ದಿಪಡಿಸಿದ್ದು, ಈ ವರ್ಷದಲ್ಲಿ  ಬಿಡುಗಡೆಗೊಳಿಸಲಿದ್ದಾರೆ. ಡಿಎಸ್ ಫ್ಯಾರಡೆಯು ಹೆಚ್ಚಿನ ಪ್ರೊಟೀನ್ ಹಾಗೂ ಕೊಯ್ಲಿಗಿಂತ ಮುಂಚೆ ಮೊಳಕೆ ಬರುವುದನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ.

ತಂತ್ರಜ್ಞಾನದ ಪ್ರಾಮುಖ್ಯತೆ:

ಸ್ಪೀಡ್ ಬ್ರೀಡಿಂಗ್ ತಂತ್ರಗಳನ್ನು ಬಳಸಿ ವಿಶೇಷವಾಗಿ ಪರಿವರ್ತಿತ ಗಾಜಿನ ಮನೆಗಳಲ್ಲಿ ವಿಜ್ಞಾನಿಗಳು ಆರು ತಲೆಮಾರಿನ ಗೋಧಿ, ಕಡಲೆ ಮತ್ತು ಬಾರ್ಲಿ ಗಿಡಗಳನ್ನು ಮತ್ತು ಒಂದು ವರ್ಷದಲ್ಲಿ ನಾಲ್ಕು ತಲೆಮಾರಿನ ಕ್ಯಾನೋಲ ಸಸ್ಯಗಳನ್ನು ಬೆಳೆಸಬಹುದು. ಸಾಮಾನ್ಯ ಗಾಜಿನ ಮನೆಗಳಲ್ಲಿ ಎರಡು ಅಥವಾ ಮೂರು ತಲೆಮಾರುಗಳ ತಳಿಯನ್ನು ಮಾತ್ರ ಬೆಳೆಸಬಹುದು. ನಿಯಂತ್ರಿತ ಹವಾಗುಣ ಪರಿಸ್ಥಿತಿಗಳಲ್ಲಿ ಬೆಳೆದ ಸಸ್ಯಗಳ ಗುಣಮಟ್ಟ ಮತ್ತು ಇಳುವರಿಯು ನಿಯಮಿತವಾದ ಗಾಜಿನಮನೆಗಳಲ್ಲಿ ಬೆಳೆದ ಗಿಂತಲೂ ಉತ್ತಮವಾಗಿದೆ.

ಸ್ಪೀಡ್ ಬ್ರೀಡಿಂಗ್ ತಂತ್ರಜ್ಞಾನ:

ಈ ತಂತ್ರಜ್ಞಾನದಲ್ಲಿ ಸಂಪೂರ್ಣವಾಗಿ ನಿಯಂತ್ರಿತ ಬೆಳವಣಿಗೆ ಪರಿಸರವನ್ನು ಬಳಸಲಾಗುತ್ತದೆ. ತೀವ್ರವಾದ ದ್ಯುತಿಸಂಶ್ಲೇಷಣೆಗೆ ಸಹಾಯ ಮಾಡಬಲ್ಲ ಎಲ್ಇಡಿ ದೀಪಗಳನ್ನು ದಿನಕ್ಕೆ 22 ಗಂಟೆಗಳವರೆಗೆ ಬಳಸಲಾಗುತ್ತದೆ.

ಎಲ್ಇಡಿ ದೀಪಗಳು ಏಕೆ:

ಎಲ್ಇಡಿ ದೀಪಗಳು ಸೋಡಿಯಂ ವೇಪರ್ ದೀಪಗಳಿಗೆ ಹೋಲಿಸಿದರೆ ಖರ್ಚನ್ನು ಕಡಿಮೆಗೊಳಿಸುತ್ತವೆ. ಅಲ್ಲದೇ ಸೋಡಿಯಂ ದೀಪಗಳು ಹೆಚ್ಚು ಶಾಖವನ್ನು ಉತ್ಪಾದಿಸುತ್ತವೆ ಮತ್ತು ಕಳಪೆ ಗುಣಮಟ್ಟದ ಬೆಳಕನ್ನು ಹೊರಸೂಸುತ್ತವೆ.

4 Thoughts to “ಪ್ರಚಲಿತ ವಿದ್ಯಮಾನಗಳು -ಜನವರಿ,5,6,2018”

  1. vasudev bagali

    jan months objective quations bidi sir

  2. ಶರತ್ ಶಿವಮೊಗ್ಗ

    ತುಂಬಾ ಧನ್ಯವಾದಗಳು

  3. Manjunath r j

    Very usefull

Leave a Comment

This site uses Akismet to reduce spam. Learn how your comment data is processed.