ರಷ್ಯಾದಿಂದ ಎರಡನೇ ಜಲಾಂತರ್ಗಾಮಿ ಲೀಸ್ ಆಧಾರದಲ್ಲಿ ಪಡೆಯಲಿರುವ ಭಾರತ
ರಷ್ಯಾದಿಂದ ಎರಡನೇ ಜಲಾಂತರ್ಗಾಮಿಯನ್ನು ಲೀಸ್ ಆಧಾರದ ಮೇಲೆ ಪಡೆಯಲು ಭಾರತ ನಿರ್ಧರಿಸಿದ್ದು, ಇದಕ್ಕೆ ರಷ್ಯಾ ಸಹ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ. ಇದು ಸುಮಾರು 2 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದ ಆಗಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಗೋವಾಗೆ ಆಗಮಿಸಿದ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಬರಲಾಗಿದೆ. ಪ್ರಾಜೆಕ್ಟ್ 971 ಹೆಸರಿನ ಅಣು ಜಲಾಂತರ್ಗಾಮಿಯನ್ನು ರಷ್ಯಾ ನೌಕಾಪಡೆಯಿಂದ ಭಾರತ ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲಿದೆ. 2020-21ರ ವೇಳೆಗೆ ಭಾರತದ ಸೇವೆಗೆ ಇದು ಲಭ್ಯವಿರಲಿದೆ.
ಹಿನ್ನಲೆ:
- ಈಗಾಗಲೇ ಭಾರತವು ‘ಅಕುಲ-2’ ಶ್ರೇಣಿಯ ಜಲಾಂತರ್ಗಾಮಿಯನ್ನು ಹೊಂದಿದೆ. 10 ವರ್ಷ ಅವಧಿಗೆ 2012ರಲ್ಲಿ ರಷ್ಯಾದಿಂದ ಭಾರತ ಇದರ ಗುತ್ತಿಗೆ ಪಡೆದುಕೊಂಡಿತ್ತು.
- ಈ ಜಲಾಂತರ್ಗಾಮಿಯನ್ನು “ಐಎನ್ಎಸ್ ಚಕ್ರ” ಎಂಬ ಹೆಸರಿನಡಿ ಸೇವೆಗೆ ಸೇರ್ಪಡೆಗೊಳಿಸಲಾಗಿದೆ. ಇದರ ಅವಧಿ 2021ಕ್ಕೆ ಮುಗಿಯಲಿದೆ.
- ಅಲ್ಲಿಂದಾಚೆಗೆ, ನೌಕಪಡೆಯ ಸಿಬ್ಬಂದಿಗೆ ತರಭೇತಿ ನೀಡಲು ಮತ್ತೊಂದು ಜಲಾಂತರ್ಗಾಮಿ ಅವಶ್ಯವೆನಿಸಿರುವ ಕಾರಣ ಈ ಒಪ್ಪಂದಕ್ಕೆ ಬರಲಾಗಿದೆ.
ಅಕುಲ ಕ್ಲಾಸ್ ಜಲಾಂತರ್ಗಾಮಿ:
ಅಕುಲ-2 ಶ್ರೇಣಿಯ ಜಲಾಂತರ್ಗಾಮಿಗಳು ಸುಮಾರು 8,140 ಟನ್ ತೂಕವಿದ್ದು, ತಾಸಿಗೆ 65 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿವೆ. ರಷ್ಯಾದ ಅತ್ಯಾಧುನಿಕ ಜಲಾಂತರ್ಗಾಮಿಗಳಲ್ಲಿ ಇದೂ ಕೂಡ ಒಂದು.
ಆಲಮಟ್ಟಿ ಜಲಾಶಯಕ್ಕೆ ವಿಶ್ವಬ್ಯಾಂಕ್ ಎಕ್ಸಲೆನ್ಸ್ ಪ್ರಶಸ್ತಿ
ರಾಜ್ಯದ ಅತಿ ದೊಡ್ಡ ಜಲಾಶಯಗಳಲ್ಲಿ ಒಂದಾದ ಆಲಮಟ್ಟಿ ಜಲಾಶಯಕ್ಕೆ ವಿಶ್ವಬ್ಯಾಂಕ್ ಎಕ್ಸಲೆನ್ಸ್ ಪ್ರಶಸ್ತಿ ಲಭಿಸಿದೆ. ಕಳೆದ ವರ್ಷ ಮೇನಲ್ಲಿ ಕೈಗೊಂಡ ಆಲಮಟ್ಟಿ ಜಲಾಶಯ ಪುನಶ್ಚೇತನ ಕಾರ್ಯವನ್ನು ಪ್ರಶಂಸಿಸಿರುವ ವಿಶ್ವಬ್ಯಾಂಕ್, ಉತ್ತಮ ಗುಣಮಟ್ಟದ ಕಾಮಗಾರಿ ನಿರ್ವಹಣೆಗಾಗಿ ಪ್ರಶಸ್ತಿ (ಎಕ್ಸಲೆನ್ಸ್ ಅವಾರ್ಡ್) ನೀಡಿದೆ. ಅಲಮಟ್ಟಿ ಜಲಾಶಯದ ಪುನಶ್ಚೇತನ ಕಾರ್ಯ ಕೈಗೊಳ್ಳಲು ವಿಶ್ವಬ್ಯಾಂಕ್ ರೂ 72 ಕೋಟಿ ನೆರವನ್ನು ಕೃಷ್ಣ ಭಾಗ್ಯ ಜಲ ನಿಗಮ ಲಿಮಿಟೆಡ್ಗೆ ನೀಡಿತ್ತು.
- ‘ಜಲಾಶಯದ ಪುನಶ್ಚೇತನಕ್ಕೆ ಬಳಸಿಕೊಂಡ ನೂತನ ಎಂಜಿನಿಯರಿಂಗ್ ತಂತ್ರಜ್ಞಾನ, ಅಚ್ಚುಕಟ್ಟಾದ ಕಾಮಗಾರಿ, ಎಂಜಿನಿಯರ್‌ಗಳ ಸೇವೆ ಮೊದಲಾದವನ್ನು ಪರಿಗಣಿಸಿ, ಈ ಪ್ರಶಸ್ತಿಯನ್ನು ನೀಡಲಾಗಿದೆ.
- ದೇಶದ 10 ರಾಜ್ಯಗಳ ಸುಮಾರು 250ಕ್ಕೂ ಅಧಿಕ ಜಲಾಶಯಗಳ ಪುನಶ್ಚೇತನ ಯೋಜನೆ ಅಡಿ ನವೀಕರಣ ಕಾರ್ಯ ನಡೆದಿತ್ತು. ದೇಶದಲ್ಲಿ ಆಲಮಟ್ಟಿ ಜಲಾಶಯಕ್ಕೆ ಮಾತ್ರ ಈ ಪ್ರಶಸ್ತಿ ಲಭಿಸಿದೆ.
ಆಲಮಟ್ಟಿ ಜಲಾಶಯದ ಬಗ್ಗೆ:
- ಆಲಮಟ್ಟಿ ಜಲಾಶಯವನ್ನು ಕೃಷ್ಣ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.
- 123 ಟಿಎಂಸಿ ಸಾಮರ್ಥ್ಯದ ಜಲಾಶಯಕ್ಕೆ 1964ರಲ್ಲಿ ಅಡಿಗಲ್ಲು ಹಾಕಿಲಾಯಿತದರು, ಜಲಾಶಯದ ಕಾಮಗಾರಿ ಪೂರ್ಣಗೊಂಡಿದ್ದು 2000ನೇ ಇಸವಿಯಲ್ಲಿ.
- 2002 ರಿಂದ ಜಲಾಶಯದಲ್ಲಿ ನೀರಿನ ಸಂಗ್ರಹಣೆ ಮಾಡಲಾಗುತ್ತಿದೆ. ಆದರೆ ಇದೇ ಮೊದಲ ಬಾರಿಗೆ ಪುನರ್ಶ್ಚೇತನ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಜಲಾಶಯ ಪುನರ್ಶ್ಚೇತನ ಮತ್ತು ಅಭಿವೃದ್ದಿ ಯೋಜನೆ (DRIP) ಯೋಜನೆಯಡಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
ಡಾ.ಸಿಂದಗಿ ರಾಜಶೇಖರ ರವರಿಗೆ ಇತಿಹಾಸ ಸಂಸ್ಕೃತಿ ಶ್ರೀ ಪ್ರಶಸ್ತಿ
ಪ್ರಸ್ತಕ ಸಾಲಿನ ಇತಿಹಾಸ ಸಂಸ್ಕೃತಿ ಪ್ರಶಸ್ತಿಗೆ ಡಾ.ಸಿಂದಗಿ ರಾಜಶೇಖರ ಅವರನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕ ಇತಿಹಾಸ ಅಕಾಡೆಮಿಯು ಈ ಪ್ರಶಸ್ತಿಯನ್ನು ಬೆಂಗಳೂರಿನ ಬೈಸಾನಿ ರುಕ್ಮಿಣಮ್ಮ ರತ್ನಂಶೆಟ್ಟಿ ನೆನಪಿನಲ್ಲಿ ನೀಡುತ್ತಿದೆ.
- ಪ್ರಶಸ್ತಿಯು ರೂ 1 ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.
- ಇದೇ 22ರಿಂದ ಮೂರು ದಿನಗಳ ಕಾಲ ಮೈಸೂರಿನಲ್ಲಿ ನಡೆಯುವ ಕರ್ನಾಟಕ ಇತಿಹಾಸ ಅಕಾಡೆಮಿಯ 30ನೇ ವಾರ್ಷಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಇತರೆ ಪ್ರಶಸ್ತಿಗಳು:
- ‘ಡಾ. ಬಾ.ರಾ. ಗೋಪಾಲ್ ಪ್ರಶಸ್ತಿ’: ಧಾರವಾಡದ ಇತಿಹಾಸ ತಜ್ಞ ಡಾ.ಎಸ್.ವಿ.ಪಾಡಿಗಾರ್ ಅವರಿಗೆ ‘ಡಾ. ಬಾ.ರಾ. ಗೋಪಾಲ್ ಪ್ರಶಸ್ತಿ’ ನೀಡಲಾಗುವುದು. ಈ ಪ್ರಶಸ್ತಿಯು ರೂ10 ಸಾವಿರ ನಗದು ಒಳಗೊಂಡಿದೆ.
- “ಸಂಶೋಧನ ಶ್ರೀ’ ಪ್ರಶಸ್ತಿ”: ಚಿತ್ರದುರ್ಗದ ಇತಿಹಾಸ ಮತ್ತು ಸಾಹಿತ್ಯ ಸಂಶೋಧಕ ಡಾ.ಬಿ.ರಾಜಶೇಖರ ಅವರಿಗೆ ‘ಸಂಶೋಧನ ಶ್ರೀ’ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿಯು ರೂ15 ಸಾವಿರ ನಗದು ಹೊಂದಿದೆ.
- ನೊಳಂಬ ಶ್ರೀ’ ಪ್ರಶಸ್ತಿ”: ಬೆಂಗಳೂರಿನ ಸಂಶೋಧಕಿ ಡಾ.ಎಚ್.ಜಯಮ್ಮ ಕರಿಯಣ್ಣ ಅವರಿಗೆ ‘ನೊಳಂಬ ಶ್ರೀ’ ಪ್ರಶಸ್ತಿ (ರೂ 10 ಸಾವಿರ ನಗದು) ಪ್ರದಾನ ಮಾಡಲಾಗುವುದು.
ಇನ್ಪೋಸಿಸ್ ಪ್ರತಿಷ್ಠಾನದಿಂದ ಬನ್ನೇರುಘಟ್ಟ ಉದ್ಯಾನವನದಲ್ಲಿ ಜೀಬ್ರಾ ಎನ್‌ಕ್ಲೋಸರ್ ಸ್ಥಾಪನೆ
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಇನ್ಫೊಸಿಸ್ ಪ್ರತಿಷ್ಠಾನದ ವತಿಯಿಂದ ರೂ 63 ಲಕ್ಷ ವೆಚ್ಚದಲ್ಲಿ ಜೀಬ್ರಾ ಎನ್‌ಕ್ಲೋಸರ್ ಅನ್ನು ನಿರ್ಮಿಸಲಾಗಿದೆ. ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ಹೇಸರಗತ್ತೆ ಜೀಬ್ರಾ ಎನ್‌ಕ್ಲೋಸರ್ ಅನ್ನು ಉದ್ಘಾಟಿಸಿದರು.
ಪ್ರಮುಖಾಂಶಗಳು:
- ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಸ್ಥಾಪಿಸಿರುವ ಜೀಬ್ರಾ ಆವರಣದಲ್ಲಿ ಎರಡು ಗಂಡು ಹಾಗೂ ಎರಡು ಹೆಣ್ಣು ಜೀಬ್ರಾಗಳಿವೆ.
- ಇವುಗಳನ್ನು ಇಸ್ರೇಲ್‌ನ ಟೆಲ್‌ಅವಿವ್ ರಾಮತ್‌ಜನ್ ಸಫಾರಿಯಿಂದ ಪ್ರಾಣಿ ವಿನಿಮಯ ಯೋಜನೆಯಡಿ ಬನ್ನೇರುಘಟ್ಟಕ್ಕೆ ತರಲಾಗಿದೆ.
- ಈ ಜೀಬ್ರಾಗಳಿಗೆ ಸುಧಾ.ಎನ್.ಮೂರ್ತಿ ಅವರು ಭರತ್, ಪೃಥ್ವಿ, ಕಾವೇರಿ ಹಾಗೂ ಹೇಮಾವತಿ ಎಂದು ನಾಮಕರಣ ಮಾಡಿದ್ದು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿವೆ.
ಬನ್ನೇರುಘಟ್ಟ ಉದ್ಯಾನವನ
- 1972ರಲ್ಲಿ ಪುಟ್ಟ ಪ್ರವಾಸಿತಾಣವಾಗಿದ್ದ ‘ಬನ್ನೇರುಘಟ್ಟ ಪಾರ್ಕ್ ’ ಅಭಿವೃದ್ದಿ ಹೊಂದಿ ಪ್ರತಿ ವರ್ಷ ರೂ 25 ಕೋಟಿ ಆದಾಯ ಗಳಿಸುವ ಹಂತಕ್ಕೆ ಬೆಳೆದಿದೆ. ಉದ್ಯಾನದಲ್ಲಿ 95 ಪ್ರಭೇದಗಳ 900 ಪ್ರಾಣಿಗಳಿದ್ದು ಕಳೆದ ವರ್ಷ 12 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ.