ಸಂಸತ್ ಮೇಲೆ ದಾಳಿ ತಡೆಗೆ ಕೇಂದ್ರದಿಂದ “ಆಪರೇಷನ್ ಗೋಲ್ಡನ್ ನೋಸ್”

ಸಂಸತ್ ಭವನದ ಮೇಲೆ ದಾಳಿ ತಡೆಯುವ ಸಲುವಾಗಿ ಕೇಂದ್ರ ಗೃಹ ಸಚಿವಾಲಯ “ಆಪರೇಷನ್ ಗೋಲ್ಡನ್ ನೋಸ್” ಎಂಬ ಕಾರ್ಯಚರಣೆ ಆರಂಭಿಸಿದೆ. ಸೋಮವಾರದಿಂದ ಮುಂಗಾರು ಅಧಿವೇಶನ ಪ್ರಾರಂಭವಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸಂಸತ್ ಭವನದ ಮೇಲೆ ಉಗ್ರರು ದಾಳಿ ನಡೆಸದಂತೆ ತಡೆಯಲು ಈ ಕ್ರಮವನ್ನು ಕೈಗೊಳ್ಳಲಾಗಿದೆ.

  • ಸಂಸತ್ ಭವನದ ಸುತ್ತ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಕಾರ್ಯಚರಣೆಯಲ್ಲಿ ಸ್ಪೋಟಕ ಪತ್ತೆಯಲ್ಲಿ ತರಬೇತಿ ಪಡೆದಿರುವ ಶ್ವಾನಗಳ ತಂಡವನ್ನು ಸಂಸತ್ ಭವನದ ಸುರಕ್ಷತೆಗಾಗಿ ನಿಯೋಜಿಸಲಾಗುತ್ತಿದೆ.
  • ಇದಕ್ಕಾಗಿ K9 ಶ್ವಾನಗಳ ತಂಡವನ್ನು ನಿಯೋಜಿಸಲು ಪಿಎಸ್​ಎಸ್ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ)ಗೆ ಮನವಿ ಸಲ್ಲಿಸಿದೆ. ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಶ್ವಾನಗಳು ವಿಶ್ವದಲ್ಲೇ ಅತ್ಯಂತ ಹೆಚ್ಚು ಸಾಮರ್ಥ್ಯವುಳ್ಳ ಶ್ವಾನಗಳೆನಿಸಿವೆ. ಐಟಿಬಿಪಿ ಶ್ವಾನಗಳ ತಂಡವನ್ನು ನಿಯೋಜಿಸಿ ಮಾನ್ಸೂನ್ ಅಧಿವೇಶನ ಮುಗಿಯುವವರಗೆ ಸಂಸತ್ ಭವನದ ಭದ್ರತೆಯಲ್ಲಿ ಸಹಕರಿಸಲಿದೆ.
  • ಆಪರೇಷನ್ ಗೋಲ್ಡನ್ ನೋಸ್ ಮಾನ್ಸೂನ್ ಅಧಿವೇಶನ ಮುಗಿದ ನಂತರ ಮುಕ್ತಾಯವಾಗಲಿದೆ. ಇದರ ಉಸ್ತುವಾರಿಯನ್ನು ಐಟಿಬಿಪಿಯ ಡಿಐಜಿ ಆರ್.ಸಿ. ಬೈಜವಾನ್ ವಹಿಸಿಕೊಳ್ಳಲಿದ್ದಾರೆ.

ಬಾಕ್ಸರ್ ವಿಜೇಂದರ್ ಸಿಂಗ್ ಗೆ ಏಷ್ಯಾ ಪೆಸಿಪಿಕ್ ಸೂಪರ್ ಮಿಡಲ್ ವೇಟ್ ಪ್ರಶಸ್ತಿ

ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ವರ್ಲ್ಡ್ ಬಾಕ್ಸಿಂಗ್ ಅಸೋಸಿಯೇಷನ್ ನ(ಡಬ್ಲ್ಯುಬಿಒ) ಏಷ್ಯಾ ಪೆಸಿಪಿಕ್ ಸೂಪರ್ ಮಿಡಲ್ ವೇಟ್ ಪ್ರಶಸ್ತಿ ಸುತ್ತಿನಲ್ಲಿ ವಿಜಯ ಕಿರೀಟವನ್ನು ತಮ್ಮದಾಗಿಸಿಕೊಂಡರು. ವಿಜೇಂದರ್ ರವರು ಆಸ್ಟ್ರೇಲಿಯಾದ ಕೆರ್ರಿ ಹೋಪ್ ರನ್ನು ಸೋಲಿಸಿ ಈ ಪ್ರಶಸ್ತಿಯನ್ನು ಗೆದ್ದುಕೊಂಡರು.

  • ದೆಹಲಿಯ ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 10 ಸುತ್ತುಗಳ ಕಠಿಣ ಹೋರಾಟದ ಪಂದ್ಯದಲ್ಲಿ ವಿಜೇಂದರ್ ಸಿಂಗ್ ವೇಲ್ಸ್ ಮೂಲದ ಅಸೀಸ್ ಬಾಕ್ಸರ್ ಕೆರ್ರಿ ಹೋಪ್ ರನ್ನು ಮಣಿಸಿದ್ದಾರೆ.
  • ವಿಜೇಂದರ್ ಸಿಂಗ್ ಗೆ ಬಾಕ್ಸಿಂಗ್ ಕಣದಲ್ಲಿ ಇದು ಸತತ 7ನೇ ಗೆಲುವಾಗಿದೆ. ಈ ಹಿಂದಿನ ಆರು ಪಂದ್ಯಗಳಲ್ಲಿ ನಾಕೌಟ್ ಮೂಲಕ ಗೆಲುವು ಸಾಧಿಸಿದ್ದರು.
  • ಬಾಕ್ಸಿಂಗ್ ರಿಂಗ್ ನಲ್ಲಿ ಗರಿಷ್ಠ ಸಮಯ ಫೈಟ್ ಮಾಡಿದ ವಿಜೇಂದರ್ 98-92, 98-92, 100-90 ರಿಂದ ಗೆಲುವು ಸಾಧಿಸಿದ್ದಾರೆ.

ಕಲುಬುರ್ಗಿ ಯಲ್ಲಿ ರಾಜ್ಯದ ಮೊದಲ ಕುರಿ ಹಾಲು ಉತ್ಪಾದನಾ ಘಟಕ

ಕಲುಬುರ್ಗಿ ಬಳಿ ರಾಜ್ಯದ ಮೊದಲ ಕುರಿ ಹಾಲು ಉತ್ಪಾದನಾ ಘಟಕ ಸ್ಥಾಪನೆಯಾಗಿದೆ. ರಾಜ್ಯಸಭಾ ಸದಸ್ಯ ಡಾ| ಬಸವರಾಜ ಪಾಟೀಲ ಸೇಡಂ ಘಟಕಕ್ಕೆ ಚಾಲನೆ ನೀಡಿದ್ದಾರೆ.

  • ಕಲಬುರಗಿ-ಬೀದರ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಕಮಲಾಪುರ ಪಟ್ಟಣದಿಂದ 5 ಕಿಮೀ ದೂರದ ಓಕಳಿ ಗ್ರಾಮದಲ್ಲಿ ಈ ಘಟಕ ಸ್ಥಾಪನೆಯಾಗಿದೆ. ಕೃಷಿ ಯೋಗ್ಯವಲ್ಲದ ವಿಶಾಲವಾದ 23 ಎಕರೆ ಭೂಮಿಯಲ್ಲಿ ಇದು ತಲೆ ಎತ್ತಲಿದ್ದು, ಒಂದೇ ಸೂರಿನಡಿ ಡೈರಿ ಫಾರ್ಮ್ ಹಾಗೂ ಅದರ ಉತ್ಪನ್ನಗಳ ತಯಾರಿಕೆಯ ಉದ್ದಿಮೆ ಇರಲಿದೆ. ಕೆಎಂಎಫ್ (ಕರ್ನಾಟಕ ಮಿಲ್ಕ್ ಫೆಡರೇಷನ್) ಮಾದರಿಯಲ್ಲಿ ಸಿಂಗಾಪುರ ಮೂಲದ ಉದ್ಯಮಿಗಳು ಈ ಘಟಕ ಸ್ಥಾಪನೆ ಮಾಡಿದ್ದಾರೆ.
  • 7,000 ಕುರಿಗಳನ್ನು ಸಾಕಲು ಆಧುನಿಕ ಸೌಲಭ್ಯಗಳುಳ್ಳ ಶೆಡ್ಗಳ ನಿರ್ಮಾಣ ಕಾರ್ಯ ನಡೆದಿದೆ. ಸದ್ಯಕ್ಕೆ ಪೂರ್ಣಗೊಂಡಿರುವ ಒಂದು ಶೆಡ್ನಲ್ಲಿ ನೂರು ಕುರಿಗಳಿಂದ ಫಾರ್ಮ್ ಪ್ರಾರಂಭಿಸಲಾಗಿದೆ. ಒಟ್ಟು 35 ಶೆಡ್ಗಳ ನಿರ್ಮಾಣಕ್ಕೆ ನೀಲನಕ್ಷೆ ರೂಪಿಸಲಾಗಿದೆ.
  • ತಮಿಳುನಾಡು ಮೂಲದ ನಿಖೀಲ್ ಗೋಪಾಲರತ್ನಂ, ಸಿಂಗಾಪುರದ ಕ್ರಿಸ್ತವ್ ಚೈಲೆಸ್ ಹಾಗೂ ಇತರರು ಸೇರಿ “ಕ್ವಿದಿತಾಸ್ ಪ್ರೈವೆಟ್ ಲಿಮಿಟೆಡ್’ ಎಂಬ ಕಂಪನಿ ಹುಟ್ಟುಹಾಕಿದ್ದು, ಅದರ ಮೂಲಕ ಕುರಿ ಸಾಕಾಣಿಕೆ ಹಾಗೂ ಹಾಲು ಉತ್ಪಾದನಾ ಘಟಕ ಸ್ಥಾಪಿಸಿದ್ದಾರೆ. ಸದ್ಯ 3 ಕೋಟಿ ರೂ.ಬಂಡವಾಳ ಹೂಡಲಾಗಿದೆ. ಕೃಪೆ: ಉದಯವಾಣಿ

ರೈತರ ಕೌಶಲ್ಯ ಅಭಿವೃದ್ದಿ ಕೇಂದ್ರ ಸ್ಥಾಪನೆಗೆ ಉತ್ತರಪ್ರದೇಶ, ನೆದರ್ಲ್ಯಾಂಡ್ ಒಪ್ಪಂದ

ಉತ್ತರ ಪ್ರದೇಶದಲ್ಲಿ ರೈತರ ಕೌಶಲ್ಯ ಅಭಿವೃದ್ದಿ ಕೇಂದ್ರ ಸ್ಥಾಪನೆ ಸಲುವಾಗಿ ಉತ್ತರ ಪ್ರದೇಶ ಸರ್ಕಾರ ನೆದರ್ಲ್ಯಾಂಡ್ ನೊಂದಿಗೆ ಕೈಜೋಡಿಸಿದ್ದ, ಈ ಸಂಬಂಧ ತಿಳುವಳಿ ಪತ್ರಕ್ಕೆ ಸಹಿ ಹಾಕಿವೆ. ನೆದರ್ಲ್ಯಾಂಡ್ ನ ಭಾರತದ ರಾಯಭಾರಿ ಅಲ್ಪೋನಸಸ್ ಸ್ಟೋಲಿಂಗ ಮತ್ತು ಉತ್ತರ ಪ್ರದೇಶ ಮುಖ್ಯ ಕಾರ್ಯದರ್ಶಿ ದೀಪಕ್ ಸಿಂಗಲ್ ಉಪಸ್ಥಿತಿಯಲ್ಲಿ ಒಪ್ಪಂದಕ್ಕೆ ಸಹಿಹಾಕಲಾಯಿತು.

  • ಈ ಒಪ್ಪಂದದ ಮೂಲಕ ರೈತರು ಆಹಾರ ಸಂಸ್ಕರಣೆ ಅಲ್ಲದೇ ಕಬ್ಬು, ಆಲೂಗಡ್ಡೆ ಮುಂತಾದ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಲು ನೂತನ ತಂತ್ರಜ್ಞಾನದ ಮಾಹಿತಿ ಪಡೆಯಲು ಸಹಕಾರಿಯಾಗಲಿದೆ.
  • ಈ ಒಪ್ಪಂದದ ಅನ್ವಯ ನಿರ್ಮಿಸಲಾಗುವ ರೈತರ ಕೌಶಲ್ಯ ಅಭಿವೃದ್ದಿ ಕೇಂದ್ರದಿಂದ ರೈತರ ಕೌಶಲ್ಯ ಅಭಿವೃದ್ದಿಯಾಗಲಿದೆ.
  • ಅಷ್ಟೇ ಅಲ್ಲದೆ, ನೆದರ್ಲ್ಯಾಂಡ್ ಈ ಒಪ್ಪಂದದಂತೆ ಉತ್ತರ ಪ್ರದೇಶದಲ್ಲಿ ಘನ ತ್ಯಾಜ್ಯ ನಿರ್ವಹಣೆ, ನಗರ ಅಭಿವೃದ್ದಿ, ಮೂಲ ಸೌಕರ್ಯ ಅಭಿವೃದ್ದಿ ಮತ್ತು ಜಲ ನಿರ್ವಹಣೆಯಲ್ಲೂ ಸಹಕಾರಿಸಲಿದೆ.
  • ಈ ಒಪ್ಪಂದ ಮೂರು ವರ್ಷಗಳ ಕಾಲ ಜಾರಿಯಲ್ಲಿರಲಿದೆ.

ವಿಶ್ವದ ಮೊದಲ ರೈಲಿನಲ್ಲಿ ಆಸ್ಪತ್ರೆ “ಲೈಫ್ಲೈನ್ ಎಕ್ಸ್ಪ್ರೆಸ್” ಗೆ 25 ವರ್ಷದ ಸಂಭ್ರಮ

ವಿಶ್ವದ ಮೊದಲ ರೈಲಿನಲ್ಲಿ ಆಸ್ಪತ್ರೆ ಎಂದೇ ಖ್ಯಾತಿ ಹೊಂದಿರುವ ಭಾರತೀಯ ರೈಲ್ವೆಯ “ಲೈಫ್ಲೈನ್ ಎಕ್ಸ್ಪ್ರೆಸ್ (Life Line Express)” 25 ವರ್ಷ ಪೂರೈಸಿದ ಸಂಭ್ರಮದಲ್ಲಿದೆ. ಸತತವಾಗಿ 25 ವರ್ಷಗಳ ಕಾಲ ಬಡ ಮತ್ತು ಅನಾಥರಿಗೆ ಆರೋಗ್ಯ ಸೇವೆ ಲೈಫ್ಲೈನ್ ಎಕ್ಸಪ್ರೆಸ್ ಸಲ್ಲಿಸುತ್ತಿದೆ. ಲೈಫ್ಲೈನ್ ಎಕ್ಸ್ಪ್ರೆಸ್ 25 ವರ್ಷ ಯಶಸ್ವಿಯಾಗಿ ಪೂರೈಸಿದ ಸಲುವಾಗಿ ಮುಂಬೈನಲ್ಲಿ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

  • ಲೈಫ್ಲೈನ್ ಎಕ್ಸ್ಪ್ರೆಸ್ ಗೆ 16 ಜುಲೈ 1991 ರಂದು ಚಾಲನೆ ನೀಡಲಾಗಿತ್ತು. ಈ ರೈಲು ಭಾರತದ ಮ್ಯಾಜಿಕ್ ರೈಲು ಎಂತಲೇ ಪ್ರಸಿದ್ದಿ ಹೊಂದಿದೆ.
  • ರೈಲಿನಲ್ಲಿ ಆಸ್ಪತ್ರೆ ಸೇವೆ ಸಲ್ಲಿಸುತ್ತಿರು ವಿಶ್ವದ ಪ್ರಥಮ ರೈಲು ಇದಾಗಿದೆ.
  • ಗ್ರಾಮೀಣ ಭಾಗದ ರೋಗಿಗಳನ್ನು ಗಮನದಲ್ಲಿಟ್ಟುಕೊಂಡು ಚಾಲನೆ ನೀಡಲಾಗಿರುವ ಈ ರೈಲು ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಹೊಂದಿದೆ.
  • ಸ್ಥಳದಲ್ಲಿಯೇ ವೈದ್ಯಕೀಯ ಸೇವೆ ಸಲ್ಲಿಸುವ ಉದ್ದೇಶದಿಂದ ಆರಂಭಿಸಿರುವ ಈ ರೈಲು ಇದುವರೆಗೆ 18 ರಾಜ್ಯಗಳಲ್ಲಿ 173 ಯೋಜನೆ ಒಳಗೊಂಡಿದೆ, ಅಲ್ಲದೇ ಸುಮಾರು 2 ಲಕ್ಷ ಕಿಲೋಮೀಟರ್ ಕ್ರಮಿಸುವ ಮೂಲಕ 10 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆಯನ್ನು ಒದಗಿಸಿದೆ.