ಅಮೆರಿಕಾದ ಸಾಹಿತಿ ಪಾಲ್ ಬೇಟ್ಟಿ ರವರಿಗೆ 2016 ಮ್ಯಾನ್ ಬೂಕರ್ ಪ್ರಶಸ್ತಿ

ಅಮೆರಿಕದ ಖ್ಯಾತ ಸಾಹಿತಿ ಪಾಲ್ ಬೇಟ್ಟಿ ಅವರು 2016 ಮ್ಯಾನ್ ಬೂಕರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆ ಮೂಲಕ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಮೊಟ್ಟಮೊದಲ  ಅಮೆರಿಕನ್ ಸಾಹಿತ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಬೇಟ್ಟಿ ಅವರ “ದ ಸೆಲ್ ಔಟ್” ಕಾದಂಬರಿಗೆ ಈ ಪ್ರಶಸ್ತಿ ಲಭಿಸಿದೆ. “ಈ ಕಾದಂಬರಿಯು ಆಘಾತಕಾರಿ ಹಾಗೂ ಅನಿರೀಕ್ಷಿತವಾಗಿ ಹಾಸ್ಯಮಯ” ಎಂದು ತೀರ್ಪುಗಾರರು ಬಣ್ಣಿಸಿದ್ದಾರೆ. ಹುಟ್ಟೂರು ಲಾಸ್ ಏಂಜಲೀಸ್ನ ಚಿತ್ರಣವನ್ನು ಕಾದಂಬರಿಗಾರ ಇದರಲ್ಲಿ ಕಟ್ಟಿಕೊಟ್ಟಿದ್ದು, ಜನಾಂಗೀಯ ಸಮಾನತೆಯ ವಿಡಂಬನೆಗೆ ಕಾದಂಬರಿಯ ರೂಪ ನೀಡಿದ್ದಾರೆ ಎಂದು ತೀರ್ಪುಗಾರರು ಹೇಳಿದ್ದಾರೆ.

ಪಾಲ್ ಬೇಟ್ಟಿ ಬಗ್ಗೆ:

  • ಪಾಲ್ ಬೇಟ್ಟಿ 1962 ರಲ್ಲಿ ಲಾಸ್ ಏಂಜಲೀಸ್ ನಲ್ಲಿ ಜನಿಸಿದ್ದಾರೆ.
  • ಬೊಸ್ಟೊನ್ ವಿಶ್ವವಿದ್ಯಾಲಯದಿಂದ ಎಂ.ಎ ಸೈಕಾಲಜಿಯಲ್ಲಿ ಪದವಿಯನ್ನು ಬೇಟ್ಟಿ ಹೊಂದಿದ್ದಾರೆ.
  • “ದಿ ವೈಟ್ ಬಾಯ್ ಶಫಲ್ (1996)”, “ಟಫ್ (2000)”, “ಸ್ಲಂಬರ್ಲ್ಯಾಂಡ್ (2008)” ಮತ್ತು “ದಿ ಸೆಲ್ ಔಟ್ (2015)” ಇವರ ಪ್ರಮುಖ ಪುಸ್ತಕಗಳು.
  • 2016 ರಲ್ಲಿ ಇವರ ಪುಸ್ತಕ ಸೆಲ್ ಔಟ್ ಗೆ “ನ್ಯಾಷನಲ್ ಬುಕ್ ಕ್ರಿಟಿಕ್ಸ್ ಸರ್ಕಲ್ ಅವಾರ್ಡ್” ಪ್ರಶಸ್ತಿಯನ್ನು ನೀಡಲಾಗಿದೆ.

ಮ್ಯಾನ್ ಬೂಕರ್ ಪ್ರಶಸ್ತಿ ಬಗ್ಗೆ:

  • ಇದು ಜಾಗತಿಕ ಮಟ್ಟದಲ್ಲಿ ಇಂಗ್ಲಿಷ್ ಸಾಹಿತ್ಯದ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು, ಮ್ಯಾನ್ ಗ್ರೂಫ್ 1969 ರಲ್ಲಿ ಸ್ಥಾಪಿಸಿದೆ.
  • ಈ ಪ್ರಶಸ್ತಿ ವಿಜೇತ ಸಾಹಿತಿ 52,500 ಪೌಂಡ್ ಬಹುಮಾನ ಪಡೆಯುವರು. ಆದರೆ ಈ ಪ್ರಶಸ್ತಿ ಪಡೆದ ಕಾದಂಬರಿ ಮಾರಾಟದಿಂದ ದೊಡ್ಡ ಮೊತ್ತದ ಲಾಭ ಬರುತ್ತದೆ. ಕಾಮನ್ವೆಲ್ತ್ ದೇಶದ ಸಾಹಿತಿಗಳಿಗಷ್ಟೇ ಸೀಮಿತವಾಗಿದ್ದ ಈ ಪ್ರಶಸ್ತಿಯನ್ನು 2013ರಲ್ಲಿ ಇತರ ದೇಶಗಳ ಸಾಹಿತಿಗಳಿಗೂ ಮುಕ್ತಗೊಳಿಸಲಾಯಿತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಅಧಿಕ ಸರಾಸರಿ ಜೀವಿತಾವಧಿ: ಎಸ್ಆರ್ಎಸ್ ವರದಿ

ಮಾದರಿ ನೋಂದಣಿ ವ್ಯವಸ್ಥೆಯು (ಎಸ್‌ಆರ್‌ಎಸ್‌) ಸಮೀಕ್ಷೆ ನಡೆಸಿ ಬಿಡುಗಡೆ ಮಾಡಿರುವ ವರದಿ ಪ್ರಕಾರ ಭಾರತದಲ್ಲಿ 2010–14ರ ಅವಧಿಯಲ್ಲಿ ಜನರ ಸರಾಸರಿ ಜೀವಿತಾವಧಿ 67 ವರ್ಷ 11 ತಿಂಗಳಿಗೆ ಏರಿಕೆಯಾಗಿದೆ. 60 ವರ್ಷಗಳ ನಂತರ ಸರಾಸರಿ ಜೀವಿತಾವಧಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅತಿ ಹೆಚ್ಚು ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ. ಆ ಮೂಲಕ ವಿವಿಧ ವಯಸ್ಸಿನವರ ಜೀವಿತಾವಧಿಯಲ್ಲಿ ಮುಂಚೂಣಿಯಲ್ಲಿದ್ದ ಕೇರಳವನ್ನು ಜಮ್ಮು ಮತ್ತು ಕಾಶ್ಮೀರ ಹಿಂದಿಕ್ಕಿದೆ.

ವರದಿಯ ಬಗ್ಗೆ:

  • ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾದ ಮಾದರಿ ನೋಂದಣಿ ವ್ಯವಸ್ಥೆಯು 2010 ರಿಂದ 2014 ರವರೆಗೆ ನಡೆಸಲಾದ ಸಮೀಕ್ಷೆಯಿಂದ ರಾಜ್ಯಗಳ ಮಟ್ಟದಲ್ಲಿ ಸರಾಸರಿ ಜೀವಿತಾವಧಿ ವರದಿಯನ್ನು ಹೊರ ತಂದಿದೆ.
  • 0, 10, 20, 30, 40, 50, 60 ಮತ್ತು 70 ಹೀಗೆ ವಿವಿಧ ವಯಸ್ಸಿನವರ ಸರಾಸರಿ ಜೀವಿತಾವಧಿಯನ್ನು ಪರಿಗಣಿಸಲಾಗಿದೆ.
  • ಒಂದು ಕೋಟಿಗಿಂತ ಹೆಚ್ಚು ಜನಸಂಖ್ಯೆ ಇರುವ 21 ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾತ್ರ ಸಮೀಕ್ಷೆ ನಡೆಸಲಾಗಿದೆ.

ಪ್ರಮುಖಾಂಶಗಳು:

  • ಗಂಡಸರಿಗಿಂತ ಹೆಂಗಸರ ಸರಾಸರಿ ಜೀವಿತಾವಧಿ ಹೆಚ್ಚು ಎಂಬ ಅಂಶ ಸಮೀಕ್ಷೆಯಿಂದ ತಿಳಿದು ಬಂದಿದೆ. ಹೆಚ್ಚು ನಿಖರವಾದ ಮಾಹಿತಿ ಪಡೆಯುವುದಕ್ಕಾಗಿ ಐದು ವರ್ಷಗಳ ಅವಧಿಯ ಅಂಕಿ ಅಂಶವನ್ನು ವಿಶ್ಲೇಷಣೆ ನಡೆಸಿ ಸರಾಸರಿ ಜೀವಿತಾವಧಿಯನ್ನು ನಿರ್ಧರಿಸಲಾಗುತ್ತದೆ.
  • ಕೇರಳದಲ್ಲಿ ಒಟ್ಟಾರೆ ಸರಾಸರಿ ಜೀವಿತಾವಧಿ (ಹುಟ್ಟಿನಿಂದ) ದೇಶದ ಇತರೆ ರಾಜ್ಯಗಳಿಂತ ಹೆಚ್ಚಿದೆ. ಕೇರಳದ ಸರಾಸರಿ ಜೀವಿತಾವಧಿ 74.9ವರ್ಷ. ಪುರಷರ ಜೀವಿತಾವಧಿ 72 ಮತ್ತು ಮಹಿಳೆಯರ ಜೀವಿತಾವಧಿ  8 ವರ್ಷ ಇದೆ.
  • ದೆಹಲಿ 73 ವರ್ಷ ಎರಡುವರೆ ತಿಂಗಳ ಜೀವಿತಾವಧಿ ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದೆ.
  • 68 ವರ್ಷ ಒಂಬತ್ತುವರೆ ತಿಂಗಳು ಜೀವಿತಾವಧಿ ಇರುವ ಕರ್ನಾಟಕ 8ನೇ ಸ್ಥಾನದಲ್ಲಿದೆ.
  • 63 ವರ್ಷ 11 ತಿಂಗಳು ಹೊಂದಿ ಅಸ್ಸಾಂ ಕಡಿಮೆ ಜೀವಿತಾವಧಿ ಹೊಂದಿದ ರಾಜ್ಯವಾಗಿದೆ.

ಜಾರಿ ನಿರ್ದೇಶನಾಲಯದ ನಿರ್ದೇಶಕರಾಗಿ ಕರ್ನಲ್ ಸಿಂಗ್ ನೇಮಕ

ಹಿರಿಯ ಐಪಿಎಸ್ ಅಧಿಕಾರಿ ಕರ್ನಲ್ ಸಿಂಗ್ ರವರನ್ನು ಜಾರಿ ನಿರ್ದೇಶನಾಲಯದ (Enforcement Directorate) ನಿರ್ದೇಶಕರಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಪ್ರಧಾನಿ ಮೋದಿ ನೇತೃತ್ವದ ನೇಮಕಾತಿ ಸಮಿತಿ ಕರ್ನಲ್ ಸಿಂಗ್ ಅವರನ್ನು ನಿರ್ದೇಶಕ ಹುದ್ದೆಗೆ ನೇಮಕ ಮಾಡಿದೆ. ಸಿಂಗ್ ಅವರು ಆಗಸ್ಟ್ 31, 2017 ರವರೆಗೆ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

  • ಕರ್ನಲ್ ಸಿಂಗ್ 1984 ಬ್ಯಾಚ್ ನ ಕೇಂದ್ರಾಡಳಿತ ಪ್ರದೇಶ ಕ್ಯಾಡ್ರೆಯ ಐಪಿಎಸ್ ಅಧಿಕಾರಿ.
  • ಈ ನೇಮಕಾತಿ ಮುನ್ನ ಸಿಂಗ್ ಅವರು ಜಾರಿ ನಿರ್ದೇಶನಾಲಯದ ಹೆಚ್ಚುವರಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಜಾರಿ ನಿರ್ದೇಶನಾಲಯ:

  • ಜಾರಿ ನಿರ್ದೇಶನಾಲಯವು ಆರ್ಥಿಕ ಗುಪ್ತಚರ ಮತ್ತು ಕಾನೂನು ಜಾರಿ ಸಂಸ್ಥೆಯಾಗಿದ್ದು, ಆರ್ಥಿಕ ಅಪರಾಧದ ವಿರುದ್ದ ಹೋರಾಡುವ ಮತ್ತು ಆರ್ಥಿಕ ಕಾನೂನು ಜಾರಿಗೊಳಿಸುವ ಜವಾಬ್ದಾರಿ ಹೊಂದಿದೆ.
  • ಕೇಂದ್ರ ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯಡಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.
  • ಕಪ್ಪುಹಣ ಮತ್ತು ಹವಾಲಾ ವ್ಯಾಪಾರ ತಡೆಯುವ ಸಲುವಾಗಿ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (FEMA) ಮತ್ತು ಮನಿ ಲಾಂಡರಿಂಗ್ ತಡೆ ಕಾಯಿದೆ (PMLA) ಜಾರಿಗೊಳಿಸುವ ಪ್ರಮುಖ ಹೊಣೆಗಾರಿಕೆ ಹೊಂದಿದೆ.

2015 ಮತ್ತು 2016ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟ

2015 ಮತ್ತು 2016ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ರಂಗಭೂಮಿಗೆ ಸಲ್ಲಿಸಿರುವ ಸೇವೆ ಪರಿಗಣಿಸಿ ದಾವಣಗೆರೆಯ ಮಾನೂಬಾಯಿ ನಾಕೋಡ ಮತ್ತು ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ಕ್ರಮವಾಗಿ 2015 ಮತ್ತು 2016ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
‘ರಂಗ ಸಾಧನೆ’ ಹೆಸರಿನಲ್ಲಿ ನೀಡಲಾಗುವ ಈ ಪ್ರಶಸ್ತಿ ಫಲಕ ಮತ್ತು ತಲಾ ₹50 ಸಾವಿರ ಒಳಗೊಂಡಿದೆ. ರಂಗಭೂಮಿಯ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರಿಗೆ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. 2015ರಲ್ಲಿ 15 ಹಾಗೂ 2016ರಲ್ಲಿ 25 ರಂಗ ಕರ್ಮಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವಾರ್ಷಿಕ ಪ್ರಶಸ್ತಿಯು ₹25 ಸಾವಿರ ನಗದು ಒಳಗೊಂಡಿದೆ.
ರಂಗಭೂಮಿ ಪುಸ್ತಕ ಪುರಸ್ಕಾರ: ಪ್ರಕಾಶ ಗರುಡ ಅವರ ‘ಕಂಪನಿ ನಾಟಕ ಅರ್ಥಾತ್ ವೃತ್ತಿ ರಂಗಭೂಮಿ’ ಹಾಗೂ ಗೋಪಾಲ ವಾಜಪೇಯಿ ಅವರ ‘ರಂಗದ ಒಳಗೆ ಮತ್ತು ಹೊರಗೆ’ ನಾಟಕ ಕೃತಿಗಳು ಪುಸ್ತಕ ಪುರಸ್ಕಾರಕ್ಕೆ ಆಯ್ಕೆಯಾಗಿವೆ.

*2016ನೇ ಸಾಲಿನ ಪ್ರಶಸ್ತಿ: ಎಲ್. ರಾಮಕೃಷ್ಣ (ಬೆಂಗಳೂರು), ವಿರೂಪಾಕ್ಷರಾವ್ ಮೊರಗೇರಿ (ಬಳ್ಳಾರಿ), ಬಸವರಾಜ ಹೂಗಾರ (ವಿಜಯಪುರ), ಮಹಾಂತಯ್ಯ ಖಾನಪೂರ (ಯಾದಗಿರಿ), ಎಚ್. ಹನುಮಂತ ನರಿಬೋಳ (ಕಲಬುರ್ಗಿ), ಅಶೋಕ ನೇಸರಗಿ (ಬೆಳಗಾವಿ), ಸಿದ್ಧಪ್ಪ ನಿಂಗಪ್ಪ ಗುಳ್ಳೆ (ಗದಗ)
ಭಾಗ್ಯಶ್ರೀ (ಬೆಂಗಳೂರು), ಮಹದೇವಪ್ಪ ಹುಣಶ್ಯಾಳ (ಬೀದರ್), ಬೈರನಹಳ್ಳಿ ಶಿವರಾಂ (ರಾಮನಗರ)
ಚೌಡಶೆಟ್ಟಿ (ಮಂಡ್ಯ), ವೆಂಕಟೇಶ್ (ಹಾಸನ), ವಾಸುದೇವರಾವ್ (ಉಡುಪಿ), ಲಕ್ಷ್ಮಣದಾಸ್ (ತುಮಕೂರು), ಚೇತನ ಡಿ ಪ್ರಸಾದ್ (ಕೋಲಾರ), ಕಮಲಮ್ಮ ಬೀಳಗಿ (ಬಾಗಲಕೋಟೆ)
ಆಂಜನೇಯ (ಬೆಂಗಳೂರು ಗ್ರಾಮಾಂತರ), ಲಲಿತಾ ಸಣ್ಣಂಗಿ (ಹಾವೇರಿ), ಛಾಯಾ ರೆಡ್ಡಿ (ಧಾರವಾಡ)
ವಿಜಯಕಾಶಿ (ಶಿವಮೊಗ್ಗ), ಪ್ರೇಮಾ ಆರ್ ತಾಳೀಕೋಟಿ (ವಿಜಯಪುರ), ವೆಂಕಟೇಶ್ ಹೆಗಡೆ (ಉತ್ತರ ಕನ್ನಡ), ಸುಂದರಮೂರ್ತಿ ಆಲೆಮನೆ, (ಬೆಂಗಳೂರು), ಎ. ಭದ್ರಪ್ಪ (ದಾವಣಗೆರೆ), ಜಿ.ಎಂ. ಸಿದ್ಧರಾಜು (ಮಂಡ್ಯ)
2015ನೇ ಸಾಲಿನ ಪ್ರಶಸ್ತಿ: ದೇವಿರಪ್ಪ ಶಿವಪ್ಪ ಬಣಕಾರ(ಹಾವೇರಿ), ವೆಂಕಟೇಶ ಕುಲಕರ್ಣಿ, (ಬಾಗಲಕೋಟೆ), ಕೆ.ವಿ. ಕೃಷ್ಣಯ್ಯ (ಬೆಂಗಳೂರು ನಗರ), ಪೂಜಾರ ಚಂದ್ರಪ್ಪ (ದಾವಣಗೆರೆ)
ಟಿ.ಆರ್.ರಾಮಚಂದ್ರರಾವ್ (ಬೆಂಗಳೂರು), ಕೆ.ವಿ. ವೆಂಕಟೇಶ್ (ಚಾಮರಾಜನಗರ), ಎಸ್.ಕೆ. ಸೂರಯ್ಯ (ಚಿತ್ರದುರ್ಗ), ಸರೋಜಿನಿ (ಮೈಸೂರು), ವಿಠ್ಠಲಕೊಪ್ಪ (ಧಾರವಾಡ), ಕಿಶೋರ್ ಡಿ.ಶೆಟ್ಟಿ (ಮಂಗಳೂರು), ಚಂದ್ರು ಉಡುಪಿ (ಶಿರಸಿ), ಮಾನಮ್ಮ ರಾಯನಗೌಡ (ರಾಯಚೂರು)
ವನಜಶ್ರೀ ಶೆಟ್ಟಿ (ಬೆಂಗಳೂರು), ಬಿ.ಇ. ತಿಪ್ಪೇಸ್ವಾಮಿ (ದಾವಣಗೆರೆ), ಪರಶುರಾಮ ಪ್ರಿಯ (ಕೊಪ್ಪಳ)

Leave a Comment

This site uses Akismet to reduce spam. Learn how your comment data is processed.