ಅಭಿನವ್ ಬಿಂದ್ರಾ ನೇತೃತ್ವದಲ್ಲಿ ಪರಾಮರ್ಶೆ ಸಮಿತಿ ರಚಿಸಿದ NRAI

ರಿಯೋ ಒಲಂಪಿಕ್ಸ್ ಶೂಟಿಂಗ್ ವಿಭಾಗದಲ್ಲಿ ಭಾರತದ ಶೂಟರ್ ಗಳು ತೋರಿದ ಕಳಪೆ ಪ್ರದರ್ಶನದ ಪರಾರ್ಮಶೆ ಮಾಡಲು ನ್ಯಾಷನಲ್ ರೈಫಲ್ ಅಸೋಸಿಯೇಶನ್ ಆಫ್ ಇಂಡಿಯಾ(NRAI) ಸಮಿತಿ ರಚಿಸಿದೆ. ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿರುವ ಶೂಟರ್ ಅಭಿನವ್ ಬಿಂದ್ರಾ ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸಮಿತಿಯು ನಾಲ್ಕು ವಾರದೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ.

  • ಒಲಂಪಿಕ್ಸ್ ನ ಶೂಟಿಂಗ್ ನಲ್ಲಿ ಭಾರತದ ಶೂಟರ್ ಗಳು ಪದಕ ಗೆಲ್ಲದೆ ವಿಫಲರಾಗಲು ಕಾರಣವೇನು ಎಂಬುದನ್ನು ಸಮಿತಿ ಅಧ್ಯಯನ ನಡೆಸಲಿದೆ.
  • ಮುಂದಿನ ಒಲಂಪಿಕ್ಸ್ ನಲ್ಲಿ ಇದೇ ರೀತಿ ವೈಫಲ್ಯತೆ ಮುಂದುವರೆಯದಿರಲು NRAI ತೆಗೆದುಕೊಳ್ಳಬೇಕಾಗಿರುವ ಅಗತ್ಯ ಕ್ರಮಗಳನ್ನು ಸಮಿತಿ ಶಿಫಾರಸ್ಸು ಮಾಡಲಿದೆ.

ನ್ಯಾಷನಲ್ ರೈಫಲ್ ಅಸೋಸಿಯೇಶನ್ ಆಫ್ ಇಂಡಿಯಾ:

  • ಶೂಟಿಂಗ್ ಕ್ರೀಡೆಯನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ನ್ಯಾಷನಲ್ ರೈಫಲ್ ಅಸೋಸಿಯೇಶನ್ ಆಫ್ ಇಂಡಿಯಾವನ್ನು 1951 ರಲ್ಲಿ ಸ್ಥಾಪಿಸಲಾಗಿದೆ.
  • ಅಂತಾರಾಷ್ಟ್ರೀಯ ಶೂಟಿಂಗ್ ಫೆಡೆರೇಶನ್ ಮತ್ತು ಭಾರತೀಯ ಒಲಂಪಿಕ್ ಅಸೋಸಿಯೇಶನ್ ಮಾನ್ಯತೆ ಪಡೆದಿದೆ.
  • ಲೋಕಸಭೆಯ ಮೊದಲ ಸ್ಪೀಕರ್ ಜಿ.ವಿ.ಮಾವ್ಳಂಕರ್ ಅವರು NRAIನ ಸಂಸ್ಥಾಪಕರು ಮತ್ತು ಮೊದಲ ಅಧ್ಯಕ್ಷರು.
  • ಪ್ರಸ್ತುತ ರಣವೀರ್ ಸಿಂಗ್ NRAIನ ಅಧ್ಯಕ್ಷರಾಗಿದ್ದಾರೆ.

ಹೈದ್ರಾಬಾದ್ ನಲ್ಲಿ ದಕ್ಷಿಣ ಭಾರತದ ಮೊದಲ ಮಕ್ಕಳ ನ್ಯಾಯಾಲಯ ಕಾರ್ಯರಂಭ

ಹೈದ್ರಾಬಾದ್ ನಂಪಳ್ಳಿ ಕ್ರಿಮಿನಲ್ ಕೋರ್ಟ್ ಸಂಕೀರ್ಣದಲ್ಲಿ ದಕ್ಷಿಣ ಭಾರತದ ಮೊದಲ ಮಕ್ಕಳ ನ್ಯಾಯಾಲಯವನ್ನು ಉದ್ಘಾಟನೆ ಮಾಡಲಾಯಿತು. ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಮಕ್ಕಳ ಕೋರ್ಟನ್ನು ಆರಂಭಿಸಲಾಗಿದೆ. ಆ ಮೂಲಕ ಮಕ್ಕಳ ನ್ಯಾಯಾಲಯ ಹೊಂದಿರುವ ಮೂರನೇ ರಾಜ್ಯವೆಂಬ ಕೀರ್ತಿಗೆ ತೆಲಂಗಣ ಪಾತ್ರವಾಗಿದೆ. ಪ್ರಸ್ತುತ ದೆಹಲಿ ಮತ್ತು ಗೋವಾದಲ್ಲಿ ಮಕ್ಕಳ ನ್ಯಾಯಾಲವಿದೆ ಹಾಗೂ ಇದು ದೇಶದ 6 ನೇ ಮಕ್ಕಳ ನ್ಯಾಯಾಲವಾಗಿದೆ.

  • ಮಕ್ಕಳ ನ್ಯಾಯಾಲಯವು ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳನ್ನಷ್ಟೇ ವಿಚಾರಣೆ ನಡೆಸಲಿದೆ.
  • ಪೊಸ್ಕೊ ಕಾಯಿದೆಯಡಿ ಕಡ್ಡಾಯವಾಗಿ ಇರಬೇಕಾದ ಮಕ್ಕಳಸ್ನೇಹಿ ಕೊಠಡಿಗಳ ವ್ಯವಸ್ಥೆ ಮತ್ತು ವಿಡಿಯೋ ಕ್ಯಾಮೆರ ಮೂಲಕ ವಿಚಾರಣೆ ವ್ಯವಸ್ಥೆಯನ್ನು ಈ ಕೋರ್ಟ್ ಹೊಂದಿದೆ.
  • ಮಕ್ಕಳ ಸ್ನೇಹಿಯಾಗಿ ಈ ಕೋರ್ಟನ್ನು ಅಭಿವೃದ್ದಿಪಡಿಸಲಾಗಿದ್ದು, ಮಕ್ಕಳಿಗೊಸ್ಕರ ಆಟದ ಸಾಮಾಗ್ರಿಗಳು ಸೇರಿದಂತೆ ಬಣ್ಣ ಬಣ್ಣದ ಪೀಠೋಪಕರಣಗಳನ್ನು ಹೊಂದಿದೆ.

ಕ್ರಿಸ್ಟಿಯಾನೋ ರೊನಾಲ್ಡೊಗೆ ಯುರೋಪ್ ನ UEFA ಶ್ರೇಷ್ಠ ಆಟಗಾರ ಪ್ರಶಸ್ತಿ

ಪೋರ್ಚುಗೀಸ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅವರು 2015-16 ಯುರೋಪ್ UEFA ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎರಡನೇ ಬಾರಿ ರೊನಾಲ್ಡೊ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರಿಯಲ್ ಮ್ಯಾಡ್ರಿಡ್ ನ ಗರೇಟ್ ಬೇಲ್ ಹಾಗೂ ಅಟ್ಲೆಟಿಕೊ ಮ್ಯಾಡ್ರಿಡ್ ನ ಅಂಟೊನೆ ಗ್ರಿಜ್ಮನ್ ರನ್ನು ಹಿಂದಿಕ್ಕಿ ರೊನೊಲ್ಡೋ ಪ್ರಶಸ್ತಿ ಗಳಿಸಿದ್ದಾರೆ. ರೋನಾಲ್ಡೋ ಈ ಹಿಂದೆ 2013-14ರಲ್ಲಿ ಪ್ರಶಸ್ತಿಯನ್ನು ಗೆದಿದ್ದರು.

ಅಡ ಹೇಗರ್ಬರ್ಗ್ (Ada Hegerberg): 2015-16 ಯುರೋಪ್ UEFA ಶ್ರೇಷ್ಠ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಲಿಯೊನೆಲ್ ಮೆಸ್ಸಿ: UEFA ಸೀಸನ್ ನ ಶೇಷ್ಠ ಗೋಲು ಪ್ರಶಸ್ತಿಯನ್ನು ಮೆಸ್ಸಿಗೆ ನೀಡಲಾಗಿದೆ. ರೋಮ್ ವಿರುದ್ದ ಗಳಿಸಿದ ಗೋಲ್ ಗಾಗಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.

UEFA ಪ್ರಶಸ್ತಿಯ ಬಗ್ಗೆ:

  • ಯುರೋಪ್ನ ಫುಟ್ಬಾಲ್ ಕ್ಲಬ್ ನಲ್ಲಿ ಆಡುವ ಫುಟ್ಬಾಲ್ ಆಟಗಾರರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಹಿಂದಿನ ವರ್ಷದಲ್ಲಿ ತೋರಿದ ಪ್ರದರ್ಶನದ ಮೇಲೆ ಪ್ರಶಸ್ತಿಗೆ ಆಯ್ಕೆಮಾಡಲಾಗುತ್ತದೆ.
  • UEFA ವರ್ಷದ ಫುಟ್ಬಾಲ್ ಆಟಗಾರ ಪ್ರಶಸ್ತಿಯ ಬದಲಿಗೆ 2011 ರಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
  • ಫಿಫಾ ವಿಶ್ವ ಆಟಗಾರ ಪ್ರಶಸ್ತಿಯನ್ನು ಬ್ಯಾಲನ್ ಡಿ’ಒರ್ ಎಂದು ಮರು ನಾಮಕರಣ ಮಾಡಿದಂತೆಯೇ ಯುರೋಪಿಯನ್ ವರ್ಷದ ಫುಟ್ಬಾಲ್ ಗೌರವವನ್ನು ಯುಇಎಫ್‌ಎ ಪ್ರಶಸ್ತಿ ಎಂದು ಬದಲಿಸಲಾಗಿತ್ತು.

ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆಯ ರಾಯಭಾರಿಯಾಗಿ ಸಾಕ್ಷಿ ಮಲಿಕ್

ಕುಸ್ತಿ ಪಟು ಸಾಕ್ಷಿ ಮಲಿಕ್ ಅವರನ್ನು ಬೇಟಿ ಬಚಾವೊ ಬೇಟಿ ಪಡಾವೊ (Save Daughter Educate Daughter) ಯೋಜನೆಯ ಹರಿಯಾಣದ ರಾಯಭಾರಿಯನ್ನಾಗಿ ನೇಮಕಮಾಡಲಾಗಿದೆ. ಬಹದ್ದೂರ್‌ಗಢದಲ್ಲಿ ನಡೆದ ಸಮಾ ರಂಭದಲ್ಲಿ ಮುಖ್ಯ ಮಂತ್ರಿ ಕಟ್ಟರ್‌ ಅವರು ಸಾಕ್ಷಿ ಅವರಿಗೆ ಸ್ಮರಣಿಕೆ ಮತ್ತು 2.5 ಕೋಟಿ ರೂ.ಗಳ ವಿತರಣೆ ವೇಳೆ ಸಾಕ್ಷಿ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಲಾಯಿತು. ರಿಯೋ ಒಲಂಪಿಕ್ಸ್ ಮಹಿಳೆಯರ 58 ಕೆ.ಜಿ ಕುಸ್ತಿ ವಿಭಾಗದಲ್ಲಿ ಸಾಕ್ಷಿ ಮಲಿಕ್ ಕಂಚಿನ ಪದಕವನ್ನು ಗೆದ್ದಿದ್ದರು. ಆ ಮೂಲಕ ಒಲಂಪಿಕ್ಸ್ ಕುಸ್ತಿಯಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ದಾಖಲೆ ಬರೆದಿದ್ದಾರೆ.

ಬೇಟಿ ಬಚಾವೊ ಬೇಟಿ ಪಡಾವೊ ಬಗ್ಗೆ:

  • ಬೇಟಿ ಬಚಾವೊ ಬೇಟಿ ಪಡಾವೊ ಅಭಿಯಾನವನ್ನು ದೇಶದಲ್ಲಿ ಮಕ್ಕಳ ಲಿಂಗಾನುಪಾತ ಇಳಿಮುಖ ಪ್ರವೃತ್ತಿಯ ಕುರಿತು ಜಾಗೃತಿ ಮೂಡಿಸಲು ಆರಂಭಿಸಲಾಗಿದೆ.
  • ಮಹಿಳೆಯರ ಕಲ್ಯಾಣಕ್ಕಾಗಿ ಮೀಸಲಿರುವ ಯೋಜನೆಗಳನ್ನು ಬಗ್ಗೆ ಅರಿವು ಮೂಡಿಸುವುದು.
  • ಲಿಂಗ ಪಕ್ಷಪಾತ ಮಾಡಿ ಲಿಂಗ ಆಯ್ಕೆಮಾಡುವುದನ್ನು ಕಠಿಣ ಕಾನೂನು ಕ್ರಮ ಜಾರಿಗೆ ತರುವ ಮೂಲಕ ನಿಷೇಧಿಸುವುದು ಈ ಅಭಿಯಾನದ ಒತ್ತಾಸೆಯಾಗಿದೆ.
  • ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯ ಈ ಅಭಿಯಾನದ ನೋಡಲ್ ಏಜೆನ್ಸಿಯಾಗಿದ್ದು, ಅಭಿಯಾನವನ್ನು ಅನುಷ್ಟಾನ ಮಾಡುವ ಹೊಣೆ ಹೊಂದಿದೆ.

ಬಾಡಿಗೆ ತಾಯ್ತನ ಮಸೂದೆ (Surrogacy Regulation Bill)ಮಂಡಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ಕೇಂದ್ರ ಸಚಿವ ಸಂಪುಟ ಬಾಡಿಗೆ ತಾಯ್ತನ ಕರಡು ಮಸೂದೆಗೆ ಸಮ್ಮತಿ ಸೂಚಿಸಿದೆ. ವಾಣಿಜ್ಯ ಉದ್ದೇಶಕ್ಕಾಗಿ ಬಾಡಿಗೆ ತಾಯ್ತನವನ್ನು ನಿಷೇಧಿಸುವುದು ಈ ಮಸೂದೆಯ ಪ್ರಮುಖ ಅಂಶವಾಗಿದೆ. ಬಾಡಿಗೆ ತಾಯಂದಿರ ಹಿತಾಸಕ್ತಿ ರಕ್ಷಿಸುವ ದೃಷ್ಟಿಯಿಂದ ಮಸೂದೆಯನ್ನು ಜಾರಿಗೆ ತರಲಾಗುತ್ತಿದೆ.

ಮಸೂದೆಯ ಪ್ರಮುಖ ಅಂಶಗಳು:

  • ವಾಣಿಜ್ಯ ಉದ್ದೇಶಕ್ಕೆ ಬಳಸುವ ಬಾಡಿಗೆ ತಾಯ್ತನವನ್ನು ನಿಷೇಧಿಸಲಾಗಿದೆ ಹಾಗೂ ಮಕ್ಕಳಿಲ್ಲದ ದಂಪತಿಗಳು ಕಾನೂನಿನ ಮೇರೆಗೆ ತಾಯ್ತನ ಪಡೆಯಬಹುದು.
  • ಕಾನೂನಾತ್ಮಕವಾಗಿ ವಿವಾಹವಾದವರು ಬಾಡಿಗೆ ತಾಯ್ತನವನ್ನು ಹೊಂದಬಹುದು. ಅಲ್ಲದೆ ಮಕ್ಕಳು ಹೊಂದುವ ದಂಪತಿಗಳಲ್ಲಿ ಒಬ್ಬರಾದರೂ ಮಕ್ಕಳಾಗದ ಬಗ್ಗೆ ವೈದ್ಯಕೀಯ ಪ್ರಮಾಣಪತ್ರ ಹೊಂದಿರಬೇಕು
  • ಏಕ ಪೋಷಕ, ಪರಸ್ಪರ ಒಪ್ಪಿಗೆಯ ಜೋಡಿ(ಲೀವಿಂಗ್ ಪಾರ್ಟ್’ನರ್ಸ್), ಸಲಿಂಗಕಾಮಿ ದಂಪತಿಗಳಿಗೆ ಬಾಡಿಗೆ ತಾಯ್ತನಕ್ಕೆ ಅವಕಾಶವಿಲ್ಲ.
  • ಬಾಡಿಗೆ ತಾಯ್ತನ ಪಡೆಯಬೇಕಾದರೆ ದಂಪತಿಗಳು ವಿವಾಹವಾಗಿ ಕನಿಷ್ಠ 5 ವರ್ಷಗಳಾಗಿರಬೇಕು
  • ದಂಪತಿಗಳು ಬಾಡಿಗೆ ತಾಯ್ತನವನ್ನು ತಮ್ಮ ಹತ್ತಿರದ ಸಂಬಂಧಿಕರಿಂದಲೇ(ಭಾರತೀಯ ನಾಗರಿಕರಾಗಿರಬೇಕು) ಪಡೆಯಬೇಕು.
  • ವಿದೇಶಿಯರು ಮತ್ತು ಸಾಗರೋತ್ತರ ಭಾರತೀಯ ಪೌರತ್ವ (ಒಸಿಐ) ಕಾರ್ಡ್‌ ಹೊಂದಿರುವವರು ಭಾರತದಲ್ಲಿ ಈ ಸೇವೆ ಪಡೆಯುವಂತಿಲ್ಲ.
  • ಮಗುವನ್ನು ಪಡೆದ ದಂಪತಿ ವೈದ್ಯಕೀಯ ವೆಚ್ಚವನ್ನು ಮಾತ್ರ ಭರಿಸಬೇಕು. ಬಾಡಿಗೆ ತಾಯಿಗೆ ಪರಿಹಾರ ರೂಪದಲ್ಲಿ ಯಾವುದೇ ಹಣ ನೀಡುವಂತಿಲ್ಲ.
  • ನಿಯಮ ಉಲ್ಲಂಘಿಸುವವರಿಗೆ 10 ವರ್ಷಗಳವರೆಗೆ ಜೈಲು ಮತ್ತು ₹ 10 ಲಕ್ಷದವರೆಗೆ ದಂಡ.

ಉಪಯೋಗಗಳು:

  • ವಾಣಿಜ್ಯ ಉದ್ದೇಶಕ್ಕಾಗಿ ಬಾಡಿಗೆ ತಾಯ್ತನ ಮೇಲೆ ಸಂಪೂರ್ಣ ನಿಷೇಧ.
  • ಬಾಡಿಗೆ ತಾಯ್ತನ ಸೇವೆ ಮೇಲೆ ಸಂಪೂರ್ಣ ನಿಯಂತ್ರಣ ಸಾಧ್ಯವಾಗಲಿದೆ.
  • ಮಕ್ಕಳಲಿಲ್ಲದ ದಂಪತಿಗಳಿಗೆ ಮಕ್ಕಳನ್ನು ಪಡೆಯಲು ವರದಾನವೆನಿಸಲಿದೆ.
  • ಬಾಡಿಗೆ ತಾಯ್ತನ ಹೆಸರಿನಲ್ಲಿ ದುಬಾರಿ ಹಣ ಪಡೆದು ಸುಲಿಗೆ ಮಾಡುವುದು ನಿಯಂತ್ರಣಕ್ಕೆ ಬರಲಿದೆ.

ಹಿನ್ನಲೆ:

ಭಾರತದಲ್ಲಿ ಬಾಡಿಗೆ ತಾಯಿ ಸೇವೆ ಪಡೆಯುವುದು ದೊಡ್ಡ ಉದ್ಯಮವಾಗಿ ಬೆಳೆದಿದ್ದು, ಇದರ ಮೇಲೆ ನಿಯಂತ್ರಣ ಹೇರುವ ಉದ್ದೇಶದೊಂದಿಗೆ ಕೇಂದ್ರ ಆರೋಗ್ಯ ಸಚಿವಾಲಯ ಕರಡು ಮಸೂದೆ ರೂಪಿಸಿದೆ. ಪ್ರಧಾನ ಮಂತ್ರಿಯವರ ಕಚೇರಿಯ ಕೋರಿಕೆಯಂತೆ ಸಚಿವರ ಉನ್ನತಾಧಿಕಾರ ಸಮಿತಿಯನ್ನು ನೇಮಿಸಲಾಗಿತ್ತು. ಈ ಸಮಿತಿ ಇತ್ತೀಚೆಗೆ ಕರಡು ಮಸೂದೆಯನ್ನು ಸಿದ್ಧಪಡಿಸಿತ್ತು. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅಲ್ಲದೆ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್‌, ಆಹಾರ ಸಂಸ್ಕರಣ ಖಾತೆ ಸಚಿವೆ ಹರ್‌ಸಿಮ್ರತ್‌ ಕೌರ್‌ ಬಾದಲ್‌ ಅವರು ಸಮಿತಿಯಲ್ಲಿದ್ದರು. ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಬಾಡಿಗೆ ತಾಯ್ತನದ ಹೆಸರಿನಲ್ಲಿ ಮಹಿಳೆಯರ ಶೋಷಣೆ ನಡೆಯುತ್ತಿದೆ ಎಂಬುದನ್ನು ಒಪ್ಪಿಕೊಂಡಿದ್ದ ಸರ್ಕಾರ, ಬಾಡಿಗೆ ತಾಯ್ತನವನ್ನು ಕಾನೂನಿನ ಚೌಕಟ್ಟಿನಡಿ ತರಬೇಕು ಎಂದಿತ್ತು. ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶದ ಮಹಿಳೆಯರನ್ನು ಶೋಷಣೆಯಿಂದ ತಪ್ಪಿಸುವ ಉದ್ದೇಶದಿಂದ ವಿದೇಶಿಯರಿಗೆ ಭಾರತದಲ್ಲಿ ಬಾಡಿಗೆ ತಾಯಿ ಸೇವೆ ಪಡೆಯುವುದನ್ನು ಕರಡು ಮಸೂದೆ ನಿಷೇಧಿಸಿದೆ.

3 Thoughts to “ಪ್ರಚಲಿತ ವಿದ್ಯಮಾನಗಳು-ಆಗಸ್ಟ್ 24, 2016”

  1. Anonymous

    Where is 25 26 27 information.its not update.

    1. Karunaduexams

      We will update by Sunday..up to date

Leave a Comment

This site uses Akismet to reduce spam. Learn how your comment data is processed.