ವಿಮಾನ ನಿಲ್ದಾಣ ನಿರ್ಮಾಣ: ಕೇಂದ್ರ ಸರ್ಕಾರರೊಂದಿಗೆ ಸಹಿ ಹಾಕಿದ ಮೊದಲ ರಾಜ್ಯ ಮಹಾರಾಷ್ಟ್ರ
ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಹತ್ತು ವಿಮಾನ ನಿಲ್ದಾಣಗಳನ್ನು ನಿರ್ಮಿಸುವ ಸಲುವಾಗಿ ಮಹಾರಾಷ್ಟ್ರ ಸರ್ಕಾರ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗೆ ಒಡಂಬಡಕಿಗೆ ಸಹ ಹಾಕಿದೆ. ಆ ಮೂಲಕದ ಪ್ರಾದೇಶಿಕ ಸಂಪರ್ಕ ಯೋಜನೆಯಡಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಹಿ ಹಾಕಿದ ಮೊದಲ ರಾಜ್ಯ ಮಹಾರಾಷ್ಟ್ರ ಎನಿಸಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಒಪ್ಪಂದಕ್ಕೆ ಸಹಿಹಾಕಿದರು.
- ಶಿರಡಿ, ಗೊಂಡಿಯ, ಅಮ್ರವತಿ, ಜಲಗಾನ್, ನಾಸಿಕ್, ಸೋಲಾಪುರ್, ನಂದೇಡ್, ಕೊಲ್ಹಪುರ, ರತ್ನಗಿರಿ ಮತ್ತು ಸಿಂಧೂದುರ್ಗ್ ನಲ್ಲಿ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲಾಗುವುದು.
- ಕೈಗೆಟುಕುವ ವಾಯುಯಾನ ಸೇವೆಯನ್ನು ನೀಡುವ ಮೂಲಕ ಪ್ರಾದೇಶಿಕ ವಾಯುಯಾನ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮಪಡಿಸುವ ಗುರಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
- ಒಪ್ಪಂದಡಿ ಕೇಂದ್ರ ಸರ್ಕಾರ ಅನುದಾನ ಒದಗಿಸಲಿದೆ. ಅಲ್ಲದೇ ಈ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಿಗೆ ಸಹಾಯ ಮಾಡಲಿದೆ.
- ಇದಕ್ಕಾಗಿ ರಾಜ್ಯ ಸರ್ಕಾರ ಅಗತ್ಯವಿರುವ ಭೂಮಿಯನ್ನು ಉಚಿತವಾಗಿ ನೀಡಲಿದ್ದು, ವಾಯು ಇಂಧನ ಮೇಲೆ ವಿಧಿಸಲಾಗಿರುವ ಶೇ 10%ಸ್ಥಳೀಯ ತೆರಿಗೆಯನ್ನು ಶೇ 1% ಇಳಿಸಲಿದ್ದು, 10 ವರ್ಷಗಳ ಕಾಲ ಜಾರಿಯಲ್ಲಿರಲಿದೆ. ಇದರ ಜೊತೆಗೆ ನೀರು, ವಿದ್ಯುತ್ ಮತ್ತು ಇತರೆ ಅಗತ್ಯ ಸೌಕರ್ಯಗಳನ್ನು ರಿಯಾಯತಿ ದರದಲ್ಲಿ ನೀಡಲಿದೆ.
ಪ್ರಾದೇಶಿಕ ಸಂಪರ್ಕ ಯೋಜನೆ ಬಗ್ಗೆ:
- ಪ್ರಾದೇಶಿಕ ಸಂಪರ್ಕ ಯೋಜನೆಯನ್ನು ರಾಷ್ಟ್ರೀಯ ವಿಮಾನಯಾನ ನಾಗರಿಕ ವಿಮಾನಯಾನ ನೀತಿ (NCAP)-2015 ರಲ್ಲಿ ಉಲ್ಲೇಖಿಸಲಾಗಿದೆ.
- ಸಾರ್ವಜನಿಕರಿಗೆ ವಿಮಾನಯಾನವನ್ನು ಕೈಗೆಟಕುವಂತೆ ಮಾಡುವುದು, ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವುದು, ಉದ್ಯೋಗವಕಾಶವನ್ನು ಸೃಜಿಸುವುದು ಮತ್ತು ಪ್ರಾದೇಶಿಕ ಸಮತೋಲನ ಬೆಳವಣಿಗೆಯನ್ನು ಉತ್ತೇಜಿಸುವುದು ಈ ಯೋಜನೆಯ ಮಹತ್ವದ ಉದ್ದೇಶಗಳಾಗಿವೆ. ಸೇವೆಯಿಂದ ವಂಚಿತವಾಗಿರುವ ಮತ್ತು ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಸೇವೆ ನೀಡುತ್ತಿರುವ ವಿಮಾನನಿಲ್ದಾಣಗಳನ್ನು ಪುನರ್ಜೀವನಗೊಳಿಸಿ ನಾಗರಿಕ ವಿಮಾನಯಾನ ವಲಯವನ್ನು ಪ್ರೋತ್ಸಾಹಿಸುವುದು ಈ ಯೋಜನೆಯ ಗುರಿಯಾಗಿದೆ.
- ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರ ಈ ಯೋಜನೆಯ ಅನುಷ್ಟಾನ ಸಂಸ್ಥೆಯಾಗಿದೆ.
- ಈ ಯೋಜನೆಯಡಿ ವಿಮಾನ ನಿಲ್ದಾಣ ನವೀಕರಣಕ್ಕೆ ತಗಲುವ ವೆಚ್ಚದಲ್ಲಿ ಶೇ 80% ಅನ್ನು ಕೇಂದ್ರ ಸರ್ಕಾರ ಭರಿಸಲಿದೆ. ಉಳಿದ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕು. ಈಶಾನ್ಯ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಶೇ 90% ರಷ್ಟು ಭರಿಸಲಿದ್ದು, ರಾಜ್ಯ ಸರ್ಕಾರ ಶೇ 10% ಮಾತ್ರ ಭರಿಸಲಿವೆ.
ಮೂರು ನೀರಾವರಿ ಯೋಜನೆಗಳ ನಿರ್ಮಾಣಕ್ಕೆ ತೆಲಂಗಣ, ಮಹಾರಾಷ್ಟ್ರ ಒಪ್ಪಂದ
ಗೋದಾವರಿ ಮತ್ತು ಅದರ ಉಪನದಿಗಳ ಮೇಲೆ ಮೂರು ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳುವ ಸಲುವಾಗಿ ಮಹಾರಾಷ್ಟ್ರ ಮತ್ತು ತೆಲಂಗಣ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿದವು. ಈ ಒಪ್ಪಂದದ ಅನ್ವಯ ಗೋದಾವರಿ ಮತ್ತು ಅದರ ಉಪನದಿಗಳಾದ ಪ್ರಣಹಿತ ಮತ್ತು ಪೆನ್ ಗಂಗಾ ನದಿಗಳ ಮೇಲೆ ಬ್ಯಾರೇಜ್ ನಿರ್ಮಿಸಲಾಗುವುದು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಮತ್ತು ತೆಲಂಗಣ ಮುಖ್ಯಮಂತ್ರಿ ಸಿ.ಚಂದ್ರಶೇಖರ್ ಸಮ್ಮುಖದಲ್ಲಿ ಮುಂಬೈನಲ್ಲಿ ಒಪ್ಪಂದಕ್ಕೆ ಸಹಿಹಾಕಲಾಯಿತು. ಇದರಿಂದ ಉಭಯ ರಾಜ್ಯಗಳು ಗೋದಾವರಿ ಮತ್ತು ಅದರ ಉಪನದಿಗಳ ಮೇಲೆ ತುಮ್ಮಿದಿ ಹಟ್ಟಿ (Tummidi Hatti), ಮೆದಿಗಡ್ಡ (Medigadda) ಮತ್ತು ಚಣಕ-ಕೊರಟ (Chanaka-Korata) ಬ್ಯಾರೇಜ್ ಗಳನ್ನು ನಿರ್ಮಿಸಲಿವೆ.
- ಮೆದಿಗಡ್ಡ ಬ್ಯಾರೇಜ್: ಇದರಡಿ ತೆಲಂಗಣ ಸರ್ಕಾರ 100ಮೀ ಎತ್ತರ ಮತ್ತು 16 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಬ್ಯಾರೇಜ್ ಅನ್ನು ನಿರ್ಮಿಸಲಿದೆ. ಈ ಬ್ಯಾರೇಜ್ ನಿಂದ ರಾಜ್ಯದ ಆರು ಜಿಲ್ಲೆಗಳಲ್ಲಿ 18.19 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು.
- ತುಮ್ಮಿದಿ ಹಟ್ಟಿ ಬ್ಯಾರೇಜ್: ಪ್ರಣಹಿತ ನದಿ ಮೇಲೆ ಈ ಬ್ಯಾರೇಜ್ ನಿರ್ಮಿಸಲಾಗುವುದು. ಇದು ಸುಮಾರು 148 ಮೀ ಎತ್ತರವಿರಲಿದ್ದು, 1.8 ಟಿಎಂಸಿ ನೀರನ್ನು ಸಂಗ್ರಹಿಸಲಿದೆ. ಈ ಯೋಜನೆಯಿಂದ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಅದಿಲಬಾದ್ ಜಿಲ್ಲೆಯ 2 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ.
- ಚಣಕ-ಕೊರಟ ಬ್ಯಾರೇಜ್: 213ಮೀ ಎತ್ತರ ಮತ್ತು 0.85 ಟಿಎಂಸಿ ಸಾಮರ್ಥ್ಯದ ಈ ಬ್ಯಾರೇಜ್ ಅನ್ನು ಪೆನ್ ಗಂಗಾ ನದಿ ಮೇಲೆ ನಿರ್ಮಿಸಲಾಗುವುದು. ಇದರಿಂದ ಮಹಾರಾಷ್ಟ್ರ ಮತ್ತು ತೆಲಂಗಣದ ಅದಿಲಬಾದ್ ಭಾಗಕ್ಕೆ ನೀರಾವರಿ ಸೌಲಭ್ಯವನ್ನು ಕಲ್ಪಿಸಲಾಗುವುದು.
Thanks